ಅರಸೀಕೆರೆಯ ಅಭಿವೃದ್ಧಿಯ ಭಗೀರಥನಿಗೆ ಸಚಿವ ಸ್ಥಾನ

KannadaprabhaNewsNetwork |  
Published : Aug 04, 2026, 01:30 AM IST
ಕೆ ಎಂ ಎಸ್  | Kannada Prabha

ಸಾರಾಂಶ

ಹಾಸನ ಜಿಲ್ಲೆಯ ರಾಜಕೀಯದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡುವ ಸರಳ ವ್ಯಕ್ತಿತ್ವ, ಅಭಿವೃದ್ಧಿ ಪರ ಚಿಂತನೆ ಹಾಗೂ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಹೋರಾಟ ನಡೆಸುವ ನಾಯಕ ಎಂಬ ಹೆಗ್ಗಳಿಕೆಯನ್ನು ಅವರು ಸಂಪಾದಿಸಿದ್ದಾರೆ. ಕೆ.ಎಂ. ಶಿವಲಿಂಗೇಗೌಡ ಅವರು 1958ರ ಫೆಬ್ರವರಿ 14ರಂದು ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದಲ್ಲಿ ಕೃಷಿಕರಾದ ಮಂಜೇಗೌಡ ಮತ್ತು ದ್ಯಾವಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸ್ವಂತ ತಾಲೂಕಿನಲ್ಲೇ ಪೂರ್ಣಗೊಳಿಸಿ, 1980ರಲ್ಲಿ ಹಾಸನ ಸರ್ಕಾರಿ ಕಲಾ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ರೈತರ ಬದುಕಿನ ಸಂಕಷ್ಟಗಳನ್ನು ಹತ್ತಿರದಿಂದ ಕಂಡು ಬೆಳೆದಿದ್ದು, ಇದೇ ಅನುಭವ ಮುಂದಿನ ರಾಜಕೀಯ ಜೀವನದ ಪ್ರಮುಖ ಬಲವಾಯಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಅಪ್ಪಟ ಕೃಷಿಕ ಕುಟುಂಬದಿಂದ ರಾಜಕೀಯಕ್ಕೆ ಕಾಲಿಟ್ಟು ಜನಸೇವೆಯನ್ನೇ ಧ್ಯೇಯವನ್ನಾಗಿಸಿಕೊಂಡು ನಾಲ್ಕು ಬಾರಿ ಸತತವಾಗಿ ವಿಧಾನಸಭೆ ಪ್ರವೇಶಿಸಿರುವ ಅರಸೀಕೆರೆ ಶಾಸಕ ಕೆ. ಎಂ. ಶಿವಲಿಂಗೇಗೌಡರಿಗೆ ಕೊನೆಗೂ ಮಂತ್ರಿ ಪದವಿ ಒಲಿದಿದ್ದು, ಅಭಿಮಾನಿಗಳು ಹಾಗೂ ತಾಲೂಕಿನ ಜನರಿಗೆ ಸಂತಸ ತಂದಿದೆ.

ಹಾಸನ ಜಿಲ್ಲೆಯ ರಾಜಕೀಯದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡುವ ಸರಳ ವ್ಯಕ್ತಿತ್ವ, ಅಭಿವೃದ್ಧಿ ಪರ ಚಿಂತನೆ ಹಾಗೂ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಹೋರಾಟ ನಡೆಸುವ ನಾಯಕ ಎಂಬ ಹೆಗ್ಗಳಿಕೆಯನ್ನು ಅವರು ಸಂಪಾದಿಸಿದ್ದಾರೆ. ಕೆ.ಎಂ. ಶಿವಲಿಂಗೇಗೌಡ ಅವರು 1958ರ ಫೆಬ್ರವರಿ 14ರಂದು ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದಲ್ಲಿ ಕೃಷಿಕರಾದ ಮಂಜೇಗೌಡ ಮತ್ತು ದ್ಯಾವಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸ್ವಂತ ತಾಲೂಕಿನಲ್ಲೇ ಪೂರ್ಣಗೊಳಿಸಿ, 1980ರಲ್ಲಿ ಹಾಸನ ಸರ್ಕಾರಿ ಕಲಾ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ರೈತರ ಬದುಕಿನ ಸಂಕಷ್ಟಗಳನ್ನು ಹತ್ತಿರದಿಂದ ಕಂಡು ಬೆಳೆದಿದ್ದು, ಇದೇ ಅನುಭವ ಮುಂದಿನ ರಾಜಕೀಯ ಜೀವನದ ಪ್ರಮುಖ ಬಲವಾಯಿತು.

ರಾಜಕೀಯ ಪಯಣವನ್ನು ಜಿಲ್ಲಾ ಪಂಚಾಯಿತಿ ಮಟ್ಟದಿಂದ ಆರಂಭಿಸಿದ ಶಿವಲಿಂಗೇಗೌಡರು, 2001ರಿಂದ 2006ರವರೆಗೆ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ಬಳಿಕ ವಿಧಾನಸಭೆ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟ ಅವರು, 2004ರಲ್ಲಿ ಆಗಿನ ಗಂಡಸಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಬಿ. ಶಿವರಾಂ ವಿರುದ್ಧ ತೀವ್ರ ಪೈಪೋಟಿ ನೀಡಿದ ಅವರು ಕೇವಲ 18 ಮತಗಳ ಅಂತರದಿಂದ ಸೋಲು ಅನುಭವಿಸಿದರು. ಈ ಸೋಲು ಅವರನ್ನು ಹಿಮ್ಮೆಟ್ಟಿಸಲಿಲ್ಲ; ಬದಲಾಗಿ ಮತ್ತಷ್ಟು ಜನಸೇವೆ ಮಾಡುವ ಸಂಕಲ್ಪಕ್ಕೆ ಬಲ ತುಂಬಿತು.

ಕ್ಷೇತ್ರ ಪುನರ್‌ ವಿಂಗಡಣೆಯ ನಂತರ ಗಂಡಸಿ ಕ್ಷೇತ್ರ ಅರಸೀಕೆರೆ ಕ್ಷೇತ್ರಕ್ಕೆ ವಿಲೀನಗೊಂಡಿತು. 2008ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶಿವಲಿಂಗೇಗೌಡರು 74,025 ಮತಗಳನ್ನು ಪಡೆದು ಸುಮಾರು 34 ಸಾವಿರಕ್ಕೂ ಅಧಿಕ ಮತಗಳ ಭರ್ಜರಿ ಅಂತರದಲ್ಲಿ ಮೊದಲ ಬಾರಿಗೆ ಶಾಸಕರಾದರು. ನಂತರ ನಡೆದ 2013 ಮತ್ತು 2018ರ ಚುನಾವಣೆಗಳಲ್ಲೂ ಜನರ ಅಪಾರ ಬೆಂಬಲದೊಂದಿಗೆ ಕ್ರಮವಾಗಿ ಸುಮಾರು 29 ಸಾವಿರ ಹಾಗೂ ದಾಖಲೆಯ 43 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದರು.

2023ರ ವಿಧಾನಸಭೆ ಚುನಾವಣೆಗೆ ಮುನ್ನ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು. ಪಕ್ಷ ಬದಲಾವಣೆಯ ಬಳಿಕವೂ ಜನರು ಅವರ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡು 98,375 ಮತಗಳನ್ನು ಪಡೆದು ಸುಮಾರು 20,177 ಮತಗಳ ಅಂತರದಲ್ಲಿ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಈ ಮೂಲಕ ಅರಸೀಕೆರೆ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ ಅಪರೂಪದ ನಾಯಕರಾಗಿ ದಾಖಲೆ ನಿರ್ಮಿಸಿದರು. ಪ್ರಸ್ತುತ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಲಿಂಗೇಗೌಡರು, ಆಡಳಿತಾತ್ಮಕ ಅನುಭವ ಮತ್ತು ಅಭಿವೃದ್ಧಿ ದೃಷ್ಟಿಕೋನದಿಂದ ರಾಜ್ಯ ರಾಜಕೀಯದಲ್ಲಿಯೂ ಪ್ರಭಾವಿ ನಾಯಕರೆಂದು ಪರಿಗಣಿಸಲ್ಪಡುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಸರಳ ವ್ಯಕ್ತಿತ್ವ: ಜನರ ನಾಯಕ

ರಾಜಕೀಯದಲ್ಲಿ ನಾಲ್ಕು ಬಾರಿ ನಿರಂತರ ಗೆಲುವು ಸಾಧಿಸಿದ್ದರೂ ಸಾಮಾನ್ಯ ಜನರೊಂದಿಗೆ ನೇರ ಸಂಪರ್ಕ ಉಳಿಸಿಕೊಂಡಿರುವ ನಾಯಕ ಎಂಬ ಹೆಸರು ಶಿವಲಿಂಗೇಗೌಡರಿಗೆ ಇದೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ, ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವುದು ಹಾಗೂ ಜನಪರ ಆಡಳಿತ ನಡೆಸುವುದು ಅವರ ಕಾರ್ಯಶೈಲಿಯ ಪ್ರಮುಖ ಲಕ್ಷಣವಾಗಿದೆ. ಪತ್ನಿ ಎಚ್. ಡಿ. ಪುಷ್ಪಾವತಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರರೊಂದಿಗೆ ಕುಟುಂಬ ಜೀವನ ನಡೆಸುತ್ತಿರುವ ಶಿವಲಿಂಗೇಗೌಡರು, ಕೃಷಿಕನ ಮಗನಾಗಿ ಆರಂಭವಾದ ತಮ್ಮ ಜೀವನ ಪಯಣವನ್ನು ಇಂದು ರಾಜ್ಯ ರಾಜಕೀಯದ ಪ್ರಮುಖ ನಾಯಕರ ಸಾಲಿಗೆ ತಂದು ನಿಲ್ಲಿಸಿದ್ದಾರೆ. ಅಭಿವೃದ್ಧಿ, ಜನಪರ ಆಡಳಿತ ಮತ್ತು ನಿರಂತರ ಜನಸಂಪರ್ಕದ ಮೂಲಕ ಅವರು ಅರಸೀಕೆರೆ ಕ್ಷೇತ್ರದಲ್ಲಿ ವಿಶಿಷ್ಟ ರಾಜಕೀಯ ಅಧ್ಯಾಯವನ್ನು ನಿರ್ಮಿಸಿದ್ದು, ಸಚಿವ ಸ್ಥಾನ ಅಲಂಕರಿಸುವತ್ತ ಅವರ ರಾಜಕೀಯ ಪಯಣ ಇದೀಗ ಹೊಸ ತಿರುವಿನಲ್ಲಿದೆ.

=======

*ಬಾಕ್ಸ್‌ ::::: ಅಭಿವೃದ್ಧಿಯ ಭಗೀರಥಅರಸೀಕೆರೆ ತಾಲೂಕಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೆ.ಎಂ. ಶಿವಲಿಂಗೇಗೌಡರು ನಡೆಸಿದ ಹೋರಾಟವೇ ಅವರ ರಾಜಕೀಯ ಜೀವನದ ಪ್ರಮುಖ ಸಾಧನೆ ಎಂದು ಜನರು ಹೇಳುತ್ತಾರೆ. ಎತ್ತಿನಹೊಳೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಹೇಮಾವತಿ ನದಿಯಿಂದ ಅರಸೀಕೆರೆಗೆ ನೀರು ತರಲು ಅವರು ಸರ್ಕಾರದ ವಿವಿಧ ಹಂತಗಳಲ್ಲಿ ನಿರಂತರ ಒತ್ತಡ ತಂದು, ಅನೇಕ ವರ್ಷಗಳ ಹೋರಾಟ ನಡೆಸಿದರು. ಈ ಕಾರಣಕ್ಕಾಗಿಯೇ ಸ್ಥಳೀಯರು ಅವರನ್ನು ‘ಅರಸೀಕೆರೆಯ ಭಗೀರಥ’ ಎಂದು ಗೌರವದಿಂದ ಕರೆಯುತ್ತಾರೆ.ಕುಡಿಯುವ ನೀರಿನ ಜೊತೆಗೆ ಗ್ರಾಮೀಣ ರಸ್ತೆ ಅಭಿವೃದ್ಧಿ, ಸೇತುವೆಗಳ ನಿರ್ಮಾಣ, ಶಿಕ್ಷಣ ಕ್ಷೇತ್ರದ ವಿಸ್ತರಣೆ, ಸರ್ಕಾರಿ ಸೌಲಭ್ಯಗಳ ಹೆಚ್ಚಳ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರ ಕೊಡುಗೆ ಗಮನಾರ್ಹವಾಗಿದೆ. ತಾಲೂಕಿಗೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಡಿಪ್ಲೊಮಾ ಕಾಲೇಜು, ವಿದ್ಯಾರ್ಥಿಗಳ ಶೈಕ್ಷಣಿಕ ಅವಕಾಶಗಳ ವಿಸ್ತರಣೆ, ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಂಪರ್ಕ, ಕುಡಿಯುವ ನೀರಿನ ಯೋಜನೆಗಳು ಹಾಗೂ ಸಾರ್ವಜನಿಕ ಸೇವೆಗಳ ಬಲವರ್ಧನೆಗೆ ಅವರು ವಿಶೇಷ ಆದ್ಯತೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೆಲುವನಾರಾಯಣಸ್ವಾಮಿಗೆ ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ
ಸಾಲಬಾಧೆಯಿಂದ ರೈತ ದಂಪತಿ ಆತ್ಮಹತ್ಯೆ: ಕುಟುಂಬಕ್ಕೆ ನಟ ವಿನೋದ್ ರಾಜ್ ಸಾಂತ್ವನ