ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗಿ ಯು.ಟಿ.ಖಾದರ್ ಪ್ರಮಾಣವಚನ ಸ್ವೀಕರಿಸಿದ ದಿನವೇ ಮಂಗಳೂರಿಗೆ ಇನ್ನೆರಡು ಸಿಹಿ ಸುದ್ದಿಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ನೀಡಿದೆ.
ಮಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗಿ ಯು.ಟಿ.ಖಾದರ್ ಪ್ರಮಾಣವಚನ ಸ್ವೀಕರಿಸಿದ ದಿನವೇ ಮಂಗಳೂರಿಗೆ ಇನ್ನೆರಡು ಸಿಹಿ ಸುದ್ದಿಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ನೀಡಿದೆ. ದ.ಕ. ಮೂಲದ ಬಿ.ಕೆ.ಹರಿಪ್ರಸಾದ್‌ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾರಥ್ಯ ನೀಡಿ ಘೋಷಣೆ ಮಾಡಲಾಗಿದೆ. ಇನ್ನೊಂದೆಡೆ ಮಂಗಳೂರಿನ ಪಿ.ವಿ.ಮೋಹನ್ ಅವರನ್ನು ವಿಧಾನ ಪರಿಷತ್ ಸ್ಥಾನ ಅಭ್ಯರ್ಥಿಯಾಗಿ ಪಕ್ಷ ಆಯ್ಕೆ ಮಾಡಿದೆ. ಹೀಗಾಗಿ ಈ ಬಾರಿ ದ.ಕ. ಜಿಲ್ಲೆಗೆ ಮೂರು ಮಂದಿಗೆ ಏಕಕಾಲಕ್ಕೆ ಅಧಿಕಾರದ ಸ್ಥಾನ ನೀಡಿದಂತಾಗಿದೆ.
ಡಿಕೆಶಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ನಡೆಯುತ್ತಲೇ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಹಿರಿಯ ಕಾಂಗ್ರೆಸಿಗ, ಸೋನಿಯಾ ಗಾಂಧಿಯ ಆಪ್ತ ಬಳಗದಲ್ಲಿ ಗುರುತಿಸಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಜೊತೆಗೆ ವಿಧಾನ ಪರಿಷತ್‌ಗೆ ಎರಡನೇ ಬಾರಿ ಅವಕಾಶ ಕಲ್ಪಿಸಲಾಗಿದೆ. ಬಿಲ್ಲವ ಸಮುದಾಯದ ಹರಿಪ್ರಸಾದ್‌ಗೆ ಉಪಮುಖ್ಯಮಂತ್ರಿ ಅಥವಾ ಸಚಿವ ಸ್ಥಾನ ನೀಡುವಂತೆ ಕರಾವಳಿಯಿಂದಲೇ ಸಮುದಾಯದ ಬೇಡಿಕೆ ಕೇಳಿಬಂದಿತ್ತು. ಕೊನೆಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದರೂ ಕೆಪಿಸಿಸಿ ಅಧ್ಯಕ್ಷಗಾದಿ ಕೈಹಿಡಿದಿದ್ದು, ಪರಿಷತ್ ಸದಸ್ಯರಾಗಿಯೂ ಮುಂದುವರಿಯುವಂತಾಗಿದೆ. ಪಿವಿ ಮೋಹನ್‌ಗೆ ಖುಲಾಯಿಸಿದ ಅದೃಷ್ಟ: ಹಿರಿಯ ಕಾಂಗ್ರೆಸ್ ಮುಖಂಡ, ಹೈಕಮಾಂಡ್ ಆಪ್ತ ವಲಯದಲ್ಲಿ ಗುರುತಿಸಿರುವ ಪಿ.ವಿ.ಮೋಹನ್‌ಗೆ ಅನಿರೀಕ್ಷಿತವಾಗಿ ಪರಿಷತ್ ಸ್ಥಾನದ ಟಿಕೆಟ್ ಲಭಿಸಿದೆ. ಇದು ಬಹುತೇಕ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇರುವುದರಿಂದ ಸುಲಭದಲ್ಲಿ ಮೋಹನ್ ಅವರು ಪರಿಷತ್‌ಗೆ ಆಯ್ಕೆಯಾಗಲಿದ್ದಾರೆ. ಎಐಸಿಸಿ ಸದಸ್ಯರಾಗಿ, ಕೆಪಿಪಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಲಕ್ಷದ್ವೀಪ ಕಾಂಗ್ರೆಸ್ ಪಾರ್ಟಿಯ ಪಿಆರ್‌ಒ ಆಗಿ ಮಂಗಳೂರು ವಿವಿ ಸಿಂಡಿಕೇಟ್, ಸೆನೆಟ್ ಸದಸ್ಯರಾಗಿ ಅನುಭವಿ. ಪತ್ರಕರ್ತರಾಗಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಪಿ.ವಿ.ಮೋಹನ್, ಕಾಂಗ್ರೆಸ್‌ನಲ್ಲೂ ವಿವಿಧ ಜವಾಬ್ದಾರಿ ಹೊಂದಿ ಚುನಾವಣಾ ಪ್ರಚಾರಗಳಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ದೇಶ, ವಿದೇಶಗಳಲ್ಲಿ ಸಂಚಾರ ಕೈಗೊಂಡಿದ್ದರು.
ಬಂಟ್ವಾಳದ ಇಬ್ಬರಿಗೆ ಕೆಪಿಸಿಸಿ ಗಾದಿ
ಬಂಟ್ವಾಳ ಮೂಲದ ಜನಾರ್ದನ ಪೂಜಾರಿ ಬಳಿಕ ಈಗ ಕೆಪಿಸಿಸಿ ಅಧ್ಯಕ್ಷಗಾದಿ ಪಡೆದ ಎರಡನೇ ವ್ಯಕ್ತಿ ಬಿ.ಕೆ.ಹರಿಪ್ರಸಾದ್ ಆಗಿದ್ದಾರೆ.
ಮೂಲತಃ ಬಂಟ್ವಾಳ ಅರಳದ ಬಿಲ್ಲವ ಸಮುದಾಯದ ಹರಿಪ್ರಸಾದ್‌ರ ತಂದೆ ಕೆಂಪಯ್ಯ, ತಾಯಿ ಗುಣವತಿ. ಇವರು ಜನಿಸಿದ್ದು ಬೆಂಗಳೂರಲ್ಲಿ, ಅಲ್ಲಿನ ಎಂಇಎಸ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪಕ್ಷದ ಹೈಕಮಾಂಡ್ ಜೊತೆ ದೆಹಲಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಹರಿಪ್ರಸಾದ್ ಅವರು, 2020ರಲ್ಲಿ ಕರ್ನಾಟಕ ರಾಜ್ಯ ರಾಜ್ಯಕಾರಣಕ್ಕೆ ಮರಳಿದ್ದರು. ಬಳಿಕ ವಿಧಾನ ಪರಿಷತ್ ಸದಸ್ಯರಾಗಿ, ವಿಪಕ್ಷ ನಾಯಕನಾಗಿ ಕಾರ್ಯ ನಿರ್ವಹಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಹರಿಪ್ರಸಾದ್ ತೀಕ್ಷ್ಣ ಮಾತುಗಳಿಂದ ಕಾಂಗ್ರೆಸ್‌ನ ‘ಫೈರ್ ಬ್ರಾಂಡ್’ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.