ಕನ್ನಡಪ್ರಭ ವಾರ್ತೆ ಮಡಿಕೇರಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಅಧಿಕಾರಿಗಳ ಜೊತೆ ಗುರುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗೆ ಉತ್ತೇಜನ ನೀಡಬೇಕು. ವಸತಿ ಶಾಲೆಯ ಮಕ್ಕಳೆಲ್ಲರೂ ಉತ್ತಮ ಶಿಕ್ಷಣ ಪಡೆದು ಐಐಟಿ, ಐಐಎಂ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ವ್ಯಾಸಂಗ ಮಾಡುವಂತಾಗಬೇಕು ಎಂದು ಹೇಳಿದರು.
ವಸತಿ ಹಾಗೂ ಸಾಮಾನ್ಯ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಎಲ್ಲರೊಂದಿಗೂ ಬೆರೆಯುವ ಗುಣ ಬೆಳೆಸಬೇಕು. ನಾಡಿನ ಪ್ರತಿಯೊಬ್ಬರೂ ಮನುಷ್ಯರು, ಕನ್ನಡಿಗರು, ಭಾರತೀಯರು ಎಂಬ ಮನೋಭಾವ ಬರಬೇಕು. ಧಾರ್ಮಿಕವಾಗಿ ಯಾರನ್ನೂ ಸಹ ವಿಂಗಡಿಸಬಾರದು. ಆ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ಕೊಡುವತ್ತ ಗಮನಹರಿಸಬೇಕು ಎಂದು ಅಬ್ದುಲ್ ಅಜೀಮ್ ಸಲಹೆ ಮಾಡಿದರು.ಸಮಾಜದ ಧಾರ್ಮಿಕ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.
ಕೊಡಗು ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 2 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು, 1 ಮೊರಾರ್ಜಿ ದೇಸಾಯಿ ವಸತಿ ಶಾಲೆ, 1 ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ 1 ಮೌಲಾನಾ ಆಜಾದ್ ಮಾದರಿ ಶಾಲೆ ಸೇರಿದಂತೆ ಒಟ್ಟು 5 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ 4 ಸಂಸ್ಥೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೌಲಾನಾ ಆಜಾದ್ ಮಾದರಿ ಶಾಲೆಯು ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ಕೊರತೆ ಇದ್ದು, ಖಾಲಿ ಇರುವ ಹುದ್ದೆಗಳನ್ನು ತುಂಬುವಂತಾಗಬೇಕು. ವಿದ್ಯಾರ್ಥಿ ವೇತನ, ಶ್ರಮಶಕ್ತಿ, ಗಂಗಾ ಕಲ್ಯಾಣ ಯೋಜನೆ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.
ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಬೇಕು. ಸಮಾಜದ ಮುಖಂಡರ ಜೊತೆ ಸಮಾಲೋಚನೆ ನಡೆಸಿ ವಸತಿ ಶಾಲೆಗಳಲ್ಲಿ ಸೌಲಭ್ಯ ಪಡೆಯಲು ಅಗತ್ಯ ಮಾಹಿತಿ ನೀಡುವಂತೆ ಸಲಹೆ ಮಾಡಿದರು.