ದಲಿತರ ಹಣ ದುರುಪಯೋಗ: ಮುನಿರಾಜು

KannadaprabhaNewsNetwork |  
Published : Jul 25, 2024, 01:27 AM IST
24ಶಿರಾ1: ಶಿರಾ ನಗರದ ಸಿರಿಗಂಧ ಪ್ಯಾಲೆಸ್‌ನಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಮುನಿರಾಜು ಉದ್ಘಾಟಿಸಿದರು. ಮಧುಗಿರಿ ವಿಭಾಗದ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ ಹಣವನ್ನು ರಾಜಾರೋಷವಾಗಿ ಬೇರೆಯವರ ಖಾತೆಗೆ ವರ್ಗಾಯಿಸಿಕೊಂಡು ಲೂಟಿ

ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ ಹಣವನ್ನು ರಾಜಾರೋಷವಾಗಿ ಬೇರೆಯವರ ಖಾತೆಗೆ ವರ್ಗಾಯಿಸಿಕೊಂಡು ಲೂಟಿ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಮುನಿರಾಜು ಹೇಳಿದರು. ಅವರು ನಗರದ ಸಿರಿಗಂಧ ಪ್ಯಾಲೆಸ್‌ನಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸಚಿವರಿಂದ ಕೂಡಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಅತಿ ಹೆಚ್ಚು ಲೂಟಿ ಹೊಡೆದ ಸರ್ಕಾರ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಭ್ರಷ್ಟಾಚಾರವಾಗಿದೆ. ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅಪೆಕ್ಸ್ ಭ್ಯಾಂಕ್‌ನಲ್ಲಿ ಸಾವಿರಾರು ಕೋಟಿ ಹಗರಣ ಮಾಡಿದ್ದಾರೆ. ಶೀಘ್ರದಲ್ಲಿಯೇ ಇದು ಸಹ ತನಿಖೆಯಾಗಲಿದೆ. ಪರಿಶಿಷ್ಟ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಸಾವಿರಾರು ಕೋಟಿ ರೂ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಜನತೆಗೆ ಮೂಲಭೂತವಾಗಿ ಬೇಕಾದ ಆರೋಗ್ಯ, ವಸತಿ, ಶಿಕ್ಷಣ ಇಂತಹ ಮೂಲಭೂತ ಸೌಲಭ್ಯಕ್ಕೆ ಸರ್ಕಾರದ ಹಣವನ್ನು ಖರ್ಚು ಮಾಡುವ ಬದಲು ಬೇನಾಮಿ ಖಾತೆಗಳಿಗೆ ಹಣ ಹಾಕಿಕೊಂಡು ಭ್ರಷ್ಟಾಚಾರ ಮಾಡುವಂತಹ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ೧೦ ವರ್ಷಗಳ ಹಿಂದಕ್ಕೆ ಕೊಂಡೊಯ್ದಿದ್ದಾರೆ ಎಂದ ಅವರು ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಸೋಲಿಸಲು ಸನ್ನದ್ಧರಾಗಿ ಪಕ್ಷದ ಸೂಚನೆಗಳನ್ನು ಪಾಲಿಸಿ ಎಂದರು. ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ತೆಗೆದು ಹಾಕಲು ಬಿಜೆಪಿ ಕಾರ್ಯಕರ್ತರೆಲ್ಲರೂ ಕಟಿಬದ್ಧರಾಗಿ ಕೆಲಸ ಮಾಡಬೇಕು. ಸಂಘಟಿತವಾಗಿ ಹೋರಾಟ ನೀಡಬೇಕು. ರಾಜ್ಯದ ೧೪೨ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಮತಗಳು ಲೀಡ್ ಬಂದಿದೆ. ಜನತೆ ಕಾಂಗ್ರೆಸ್ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಹಗಲು ರಾತ್ರಿ ಎನ್ನದೆ ರಾಜ್ಯಾದ್ಯಂತ ಸಂಚಾರ ನಡೆಸಿ ಪಕ್ಷ ಸಂಘಟನೆ ಮಾಡುತ್ತಿದ್ದು, ಅವರಿಗೆ ಕೈಜೋಡಿಸುವ ಮೂಲಕ ಪಕ್ಷವನ್ನು ಸಧೃಡಗೊಳಿಸೋಣ. ಮುಂಬರುವ ತಾ.ಪಂ ಮತ್ತು ಜಿ.ಪಂ. ಚುನಾವಣೆಯಲ್ಲಿಯೂ ಸಹ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಎಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದರು. ಸಭೆಯಲ್ಲಿ ಮಧುಗಿರಿ ವಿಭಾಗದ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಿಪತಿ, ಮಹಿಳಾ ಘಟಕದ ಅಧ್ಯಕ್ಷೆ ಉಮಾ ವಿಜಯರಾಜ್, ಎಲ್.ಸಿ.ನಾಗರಾಜು, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅನಿಲ್ ಕುಮಾರ್, ಡಾ.ವೆಂಕಟರಮಣಯ್ಯ, ಸುಶೀಲಮ್ಮ, ನಿಕಟಪೂರ್ವ ಅಧ್ಯಕ್ಷ ಬಿ.ಕೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಕೆ.ಶ್ರೀನಿವಾಸ್, ಯಂಜಲಗೆರೆ ಮೂರ್ತಿ, ಓಬಿಸಿ ಘಟಕದ ಅಧ್ಯಕ್ಷ ಮಾಗೋಡು ಪ್ರತಾಪ್, ಶಿರಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ನಗರ ಅಧ್ಯಕ್ಷ ಗಿರಿಧರ್, ಪ್ರಧಾನ ಕಾರ್ಯದರ್ಶಿ ಕೊಟ್ಟ ಡಿ.ಪಿ.ರಂಗನಾಥ್, ಜಿಲ್ಲಾ ಕಾರ್ಯದರ್ಶಿ ಎಸ್.ಪಿ.ಕೃಷ್ಣಮೂರ್ತಿ, ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ