ಅಂಬೇಡ್ಕರ್ ನಿಗಮದ 20, ಬಸವ ವಸತಿ ಯೋಜನೆಯಡಿ 62 ಮನೆ ಬಡವರಿಗೆ ನೀಡದೆ ಮೋಸ
ಕಲ್ಯಾಣ ಕರ್ನಾಟಕ ಕಾರ್ಮಿಕರ ವೇದಿಕೆ ವತಿಯಿಂದ ತನಿಖೆಗೆ ಒತ್ತಾಯ, ಜಿಪಂ ಸಿಒಗೆ ಮನವಿಕನ್ನಡಪ್ರಭ ವಾರ್ತೆ ಯಾದಗಿರಿಜಿಲ್ಲೆಯ ಶಹಾಪುರ ತಾಲೂಕಿನ ಖಾನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕಲ್ಯಾಣ ಕನಾಟಕ ಕಾರ್ಮಿಕರ ವೇದಿಕೆ ಜಿಲ್ಲಾ ಘಟಕ, ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಪಂ ಸಿಇಒ ಗರೀಮಾ ಪನ್ವಾರ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮೇಟಿ, ಉಪಾಧ್ಯಕ್ಷ ರಾಮಕೃಷ್ಣ ಪೂಜಾರಿ ಮಾತನಾಡಿ, ಶಹಾಪುರ ತಾಲೂಕಿನ ಖಾನಾಪೂರ ಗ್ರಾಪಂ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಡಾ.ಅಂಬೇಡ್ಕರ್ ನಿಗಮದ 20 ಮನೆಗಳು, ಬಸವ ವಸತಿ ಯೋಜನೆಯಡಿ 62 ಮನೆಗಳು, ಒಟ್ಟು 82 ಮನೆಗಳು ಬಂದಿದ್ದು, ಯಾವುದೇ ವಾರ್ಡ್ ಸಭೆ, ಗ್ರಾಮಸಭೆ ನಡೆಸದೆ ಗ್ರಾಪಂ ಅಧ್ಯಕ್ಷರು ಮತ್ತು ಕೆಲ ಸದಸ್ಯರು ತಮ್ಮ ಕುಟುಂಬದವರಿಗೆ ಹಾಗೂ ಅನುಕೂಲಸ್ಥರಿಗೆ ಆಯ್ಕೆ ಮಾಡಿದ್ದಾರೆ. ಬಡ ಜನರಿಗೆ ಕೈ ಬಿಟ್ಟು, ತಮಗೆ ಬೇಕಾದ ಫಲಾನುಭವಿಗಳಿಗೆ ನೀಡಿ ಅನುಮೋದನೆಗೆ ಕಳುಹಿಸಿದ್ದು, ಜಿಪಿಎಸ್ ಕೂಡ ಮಾಡಿದ್ದು, ಕೂಡಲೇ ಅನುಮೋದನೆ ನೀಡದೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.ಬಡವರಿಗೆ ಬಂದ ಮನೆಯಲ್ಲಿ ಒಬ್ಬರಿಂದ 30,000 ರು. ಹಣ ಪಡೆದು ಮನೆ ನೀಡಿದ್ದು, ಒಟ್ಟು 82 ಮನೆಗಳಿಗೆ ರಾತ್ರೋ ರಾತ್ರಿ ಜಿಪಿಎಸ್ ಮಾಡಿ, ಭಾರಿ ಅವ್ಯವಹಾರ ನಡೆಸಿ ಕಾನೂನು ಬಾಹಿರ ಕೆಲಸ ಮಾಡಿರುತ್ತಾರೆ ಎಂದು ಆರೋಪಿಸಿದರು.
ಈ ಎಲ್ಲ ಅವ್ಯವಹಾರ ತನಿಖೆ ಮಾಡಿ ನ್ಯಾಯ ಒದಗಿಸಿ, ತಪ್ಪಿತಸ್ಥರನ್ನು ಅಮಾನತುಗೊಳಿಸಬೇಕು. ನಷ್ಟವಾದ ಹಣ ಮರು ಪಾವತಿಸಿಕೊಳ್ಳಲು ತುರ್ತಾಗಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕ್ರಮಕ್ಕೆ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಜಿಲ್ಲಾ ಮುಖಂಡ ರವೀಂದ್ರ ಪಾಟೀಲ್, ವಿಶ್ವನಾಥ, ಬಾಬು ಕಟ್ಟಿಮನಿ, ಜಿಲ್ಲಾಧ್ಯಕ್ಷ ವಿರೂಪಣ್ಣ, ಕಾರ್ಯಾಧ್ಯಕ್ಷ ಸಿದ್ದು ಎಸ್. ಅರ್ಜುಣಗಿ, ಸೂರ್ಯಕಾಂತ ಕಟ್ಟಿಮನಿ, ವೆಂಕಟೇಶ ಹೆಚ್., ಶ್ವೇತಾ ಆರ್. ಪಾಟೀಲ್, ರೇಣುಕಾ ಎಂ. ಬಿರಾದಾರ, ಶರಣಪ್ಟ ವೈ. ತಿಪ್ಪನಟಗಿ, ಮರಿಲಿಂಗಪ್ಪ ಪೂಜಾರಿ ಮನಗನಾಳ, ದೇವರಾಜ ಬರೆಗಲ್, ದೇವಪ್ಪ ಎನ್. ದೇವರಳ್ಳಿ, ಶರಣಪ್ಪ ಗೌಂಡಿ, ಅರುಣಕುಮಾರ, ಹೊನ್ನಪ್ಪ ದೇವರಳ್ಳಿ, ಬಂಗಾರೆಪ್ಪ ಚಕ್ಕಡಿ, ಸಾಬಣ್ಣ, ಮಾಳಪ್ಪ ವೊಂಟೂರ ಇತರರಿದ್ದರು.