ಕನಕಪುರ: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳನ್ನು ವಂಚಿಸಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಉಳ್ಳವರಿಗೆ ಮನೆ ನಿರ್ಮಿಸಿಕೊಟ್ಟು ಕೋಟ್ಯಂತರ ರು. ಅವ್ಯವಹಾರ ನಡೆಸಿದ್ದಾರೆ ಎಂದು ಶ್ರೀರಾಮ ಸೇನೆಯ ಸುಂದರೇಶ್ ನಗರ್ವಾಲ್ ಆರೋಪಿಸಿದರು.
ಜಿಲ್ಲಾ ಶ್ರೀರಾಮ ಸೇನೆ ಅಧ್ಯಕ್ಷ ನಾಗಾರ್ಜುನ್ ಗೌಡ ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 2017-18ನೇ ಸಾಲಿನಲ್ಲಿ ಸುಮಾರು 1881 ಮನೆ ಮಂಜುರಾಗಿದ್ದು ಎರಡು ವರ್ಷದೊಳಗೆ ಎಲ್ಲಾ ಮನೆಗಳು ನಿರ್ಮಿಸಿ ಹಸ್ತಾಂತರ ಮಾಡಬೇಕು ಎಂಬ ಷರತ್ತಿನೊಂದಿಗೆ ರಾಜ್ಯ ಕೋಳಗೇರಿ ನಿರ್ಮೂಲನಾ ಮಂಡಳಿಯಿಂದ ಗೌರಿ ಇನ್ಪ್ರಾ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ 95 ಕೋಟಿಗೆ ಟೆಂಡರ್ ಪಡೆದಿತ್ತು. ಆದರೆ ಟೆಂಡರ್ ಪಡೆದು ಐದಾರು ವರ್ಷ ಕಳೆದಿದ್ದರು ಇನ್ನು ಮನೆಗಳು ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಕೆಲ ಮನೆಗಳನ್ನು ಅರ್ಧ ನಿರ್ಮಿಸಿ ಕೈಬಿಟ್ಟಿದ್ದಾರೆ. ಕೆಲ
ಫಲಾನುಭವಿಗಳು ಇದ್ದ ಮನೆಗಳನ್ನು ಕೆಡವಿ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಯೋಜನೆಯ ಫಲಾನುಭವಿಗಳಾಗಿ ಆಯ್ಕೆಯಾಗಿದ್ದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಹೆಸರಿನಲ್ಲಿದ್ದ ಮನೆಗಳನ್ನು ಉಳ್ಳವರಿಗೆ, ಬಲಾಡ್ಯರಿಗೆ ನಿರ್ಮಿಸಿಕೊಟ್ಟು, 80 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಎನ್ ಒಸಿ ಕೊಟ್ಟಿದ್ದಾರೆ. ಕೊಳಗೇರಿ ನಿರ್ಮಾಣ ಮಂಡಳಿಯ ಫಲಾನುಭವಿಗಳ ಆಯ್ಕೆ ಮತ್ತು ಮನೆಗಳ ನಿರ್ಮಾಣ ಕಾರ್ಯದಲ್ಲಿ ದೊಡ್ಡ ಹಗರಣವೇ ನಡೆದಿದೆ. ಇದರ ಬಗ್ಗೆ ಗುತ್ತಿಗೆದಾರರನ್ನು ಕೇಳಿದರೆ ನಗರಸಭೆಯಿಂದ ನಮಗೆ 9 ಕೋಟಿ ಬಾಕಿ ಹಣ ಬರಬೇಕಾಗಿದೆ, ಅದು ಬಂದ ನಂತರ ಕೆಲಸ ಪೂರ್ಣಗೊಳಿಸುತ್ತೇವೆನ್ನುತ್ತಾರೆ. ಇದಕ್ಕೆ ಸಂಬಂಧಪಟ್ಟ ಎಂಜಿನಿಯರ್ ಹಾಗೂ ಅಧಿಕಾರಿಗಳನ್ನು ಅಮಾನತುಗೊಳಿಸಿ ಭ್ರಷ್ಟಾಚಾರ ತನಿಖೆ ನಡೆಸಲು ಸಿಬಿಐಗೆ ಒಪ್ಪಿಸಬೇಕು. ತಪ್ಪಿತಸ್ಥ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಆದಷ್ಟೂ ಬೇಗ ನೈಜ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡುವಂತೆ
ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಮಾಡಿರುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾ ಉಪಾಧ್ಯಕ್ಷ ಅರುಣ್, ಕಾರ್ಯದರ್ಶಿಗಳಾದ ನವೀನ್, ದುರ್ಗೇಶ್, ತಾಲೂಕು ಅಧ್ಯಕ್ಷ ಮಹೇಶ್ ಗೌಡ , ರಾಜೇಶ್, ಪದಾಧಿಕಾರಿಗಳಾದ ಕುಮಾರ್, ಶರತ್, ಸುಹಾಸ್, ಶೇಖರ್ ಇತರರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರದ ತಾಲೂಕು ಕಚೇರಿ ಮುಂದೆ ಜಿಲ್ಲಾ ಶ್ರೀರಾಮ ಸೇನೆ ಪದಾಧಿಕಾರಿಗಳು ರಾಜ್ಯ ಕೊಳಗೇರಿ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.