ಹಾನಗಲ್ಲ: ತಾಲೂಕಿನಲ್ಲಿ ಅಂಗನವಾಡಿಗಳಿಗೆ ಹಾಲಿನ ಪುಡಿ ಪೂರೈಕೆ ಆಗದೇ ಇದ್ದರೂ ಗಮನಕ್ಕೆ ತರದೆ ಹಾರಿಕೆ ಉತ್ತರ ನೀಡಿದ ಸಿಡಿಪಿಒ ನಂದಕುಮಾರ ಹಾಗೂ ಅಸಮರ್ಪಕ ಮಾಹಿತಿ ನೀಡಿದ ಆರೋಗ್ಯಾಧಿಕಾರಿ ಡಾ. ಲಿಂಗರಾಜ ಅವರ ವಿರುದ್ಧ ಕಿಡಿಕಾರಿದ ಶಾಸಕ ಶ್ರೀನಿವಾಸ್ ಮಾನೆ, ಇನ್ನು ಸರ್ಕಾರಿ ಕಚೇರಿ, ಶಾಲಾ- ಕಾಲೇಜುಗಳಿಗೆ ನನ್ನ ಸೂಚನೆ ರಹಿತ ಭೇಟಿ ಇರುತ್ತದೆ. ಎಚ್ಚರದಿಂದ ಕಾರ್ಯ ನಿರ್ವಹಿಸಿ ಎಂದು ತಿಳಿಸಿದರು.ಗುರುವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಪ್ರಗತಿ ಪರಿಶೀಲನಾ ವರದಿ ಪಡೆಯುವ ಸಂದರ್ಭದಲ್ಲಿ, ಮಕ್ಕಳು ದೇವರಿಗೆ ಸಮಾನ. ಅವರಿಗೂ ಅನ್ಯಾಯ ಮಾಡುತ್ತಿರಲ್ಲ. ನಾಚಿಕೆ ಆಗಬೇಕು ನಿಮಗೆ ಎಂದು ಹರಿಹಾಯ್ದರು.
ಯಾವುದೇ ಸಮಸ್ಯೆ, ಏನೇ ಮಾಹಿತಿ ಕೇಳಿದರೂ ಸಮರ್ಪಕ ಮಾಹಿತಿ ನೀಡದೇ ಕೆಲ ತಿಂಗಳ ಹಿಂದೆಯಷ್ಟೆ ಬಂದಿದ್ದೇನೆ ಎಂದು ಸಿಡಿಪಿಒ ಹಾರಿಕೆ ಉತ್ತರ ನೀಡಿದಾಗ ಮತ್ತೆ ಆಕ್ರೋಶಗೊಂಡ ಶಾಸಕ ಮಾನೆ, ನೀವು ತಾಲೂಕಿಗೆ ಹೊಸಬರು ಇರಬಹುದು. ಇಲಾಖೆಗೆ ಹೊಸಬರಲ್ಲ. ಎಲ್ಲದಕ್ಕೂ ಹಾರಿಕೆ ಉತ್ತರ ಕೊಡುತ್ತೀರಿ. ಇದುವರೆಗೆ ಎಷ್ಟು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದೀರಿ. ಕರ್ತವ್ಯಲೋಪ ತೋರಿದ ಎಷ್ಟು ಸಿಬ್ಬಂದಿಗೆ ಮೇಲೆ ಕ್ರಮ ಜರುಗಿಸಿದ್ದೀರಿ. ತಾಲೂಕಿನಲ್ಲಿ ನೀವೇ ಸುಪ್ರೀಂ ಎಂದು ಭಾವಿಸಿದ್ದೀರಾ. ಹಾಲಿನ ಪುಡಿ ಪೂರೈಕೆ ಆಗದೇ ಇರುವುದಕ್ಕೆ ನಿಮ್ಮನ್ನೇ ಹೊಣೆ ಮಾಡುವೆ ಎಂದು ಎಚ್ಚರಿಸಿದಾಗ, ನನ್ನಿಂದ ತಪ್ಪಾಗಿದೆ. ಇನ್ನು ಸರಿಯಾಗಿ ಕೆಲಸ ಮಾಡಿಕೊಂಡು ಹೋಗುವುದಾಗಿ ಸಿಡಿಪಿಒ ಶಾಸಕರಲ್ಲಿ ಮನವಿಗೆ ಮುಂದಾದರು. ಆರೋಗ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿ ಅಸಮರ್ಪಕ ಉತ್ತರ ನೀಡಲು ಮುಂದಾದ ಟಿಎಚ್ಒ ಡಾ. ಲಿಂಗರಾಜ ಅವರೂ ಶಾಸಕರ ಕೆಂಗಣ್ಣಿಗೆ ಗುರಿಯಾದರು. ನೇರವಾಗಿ ಉತ್ತರ ಕೊಡಿ. ಸುತ್ತಿ ಬಳಸಿ ಏಕೆ ಮಾತನಾಡುತ್ತೀರಿ. ನಿಮಗೆ ಸ್ವಲ್ಪೂ ತಾಳ್ಮೆ ಇಲ್ಲ ಸೇವಾಭಾವನೆಯೂ ಇಲ್ಲ. ಮಾನವೀಯತೆ ಮರೆತಿದ್ದೀರಿ. ರೋಗಿಗಳು ಬಳಿಗೆ ಬಂದಾಗ ಅರ್ಧ ರೋಗವನ್ನು ಬರೀ ಮಾತನಾಡಿಸಿ ವಾಸಿ ಮಾಡಬೇಕು. ಇದನ್ನು ನಿಮಗೆ ವೈದ್ಯಕೀಯ ಪದವಿ ಓದುತ್ತಿದ್ದಾಗ ಹೇಳಿಕೊಟ್ಟಿಲ್ಲವಾ ಎಂದು ಪ್ರಶ್ನಿಸಿ, ಫೆಬ್ರವರಿ ತಿಂಗಳಿನಲ್ಲಿ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದೀರಿ ಎನ್ನುವ ವರದಿ ಕೊಡಿ. ಇಲಾಖೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಜವಾಬ್ದಾರಿಯ ಬಗ್ಗೆಯೂ ನಿಮಗೆ ಅರಿವಿಲ್ಲ. ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ ಕೆಲಸ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿ ಟಿಎಚ್‌ಒ ಕರ್ತವ್ಯಲೋಪ ಎಸಗುತ್ತಿದ್ದಾರೆ ಎಂದು ಈ ದಿನದ ಸಭೆಯ ನಡಾವಳಿಯಲ್ಲಿ ಉಲ್ಲೇಖಿಸಿ ಮೇಲಧಿಕಾರಿಗಳಿಗೆ ಕಳಿಸಿ ಎಂದು ಇಒ ಪರಶುರಾಮ ಪೂಜಾರ ಅವರಿಗೆ ಸೂಚಿಸಿದರು.ಪ್ರತಿಯೊಂದು ವಿದ್ಯಾರ್ಥಿನಿಲಯಕ್ಕೂ ನಿಯಮಿತವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳ ಚಲನವಲನದ ಮೇಲೆ ನಿಗಾ ಇಡಬೇಕು. ಕೆಲ ವಿದ್ಯಾರ್ಥಿಗಳು ನಿಲಯದಲ್ಲಿ ಇರುವುದೇ ಇಲ್ಲ ಎನ್ನುವ ದೂರುಗಳಿವೆ. ನಾಳೆ ಏನಾದರೂ ಸಮಸ್ಯೆ ಆದರೆ ನಿಮಗೇ ಸಮಸ್ಯೆ. ಹಾಗಾಗಿ ಕಾಳಜಿ ವಹಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಆನಂದ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ ಅವರಿಗೆ ಸೂಚಿಸಿದರು.ನಿಟಗಿನಕೊಪ್ಪದಲ್ಲಿ ಮುಖ್ಯರಸ್ತೆ, ಗಟಾರ ಒತ್ತುವರಿ ಮಾಡಲಾಗಿದೆ. ಒಮ್ಮೆ ಒತ್ತುವರಿ ತೆರವುಗೊಳಿಸಿದರೂ ಮತ್ತೆ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಿ ಕಾನೂನು ಕ್ರಮ ಜರುಗಿಸಿ ಎಂದು ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ ಅವರಿಗೆ ತಿಳಿಸಿದರು.ತಾಲೂಕಿನಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದ್ದು, ಒಂದು ವಾರದಲ್ಲಿ ರದ್ದುಪಡಿಸಿರುವ ಕಾರ್ಡ್ ಪುನಃ ಚಾಲ್ತಿ ಮಾಡಿಕೊಡಿ. ನಮ್ಮ ತಾಲೂಕಿನ ಮೇಲ್ವಿಚಾರಕರಿಗೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ಆಹಾರ ಇಲಾಖೆಯ ಶಿರಸ್ತೇದಾರ್ ಎಚ್.ಸಿ. ಮಾಳಾಪೂರ ಅವರಿಗೆ ನಿರ್ದೇಶಿಸಿದರು.
ತಹಸೀಲ್ದಾರ್ ರೇಣುಕಾ ಎಸ್., ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಡಿಪಿ ಸದಸ್ಯರಾದ ರಾಜಕುಮಾರ ಜೋಗಪ್ಪನವರ, ಅನಿತಾ ಡಿಸೋಜ, ಹನೀಫ್ ಬಂಕಾಪೂರ, ಮಾರ್ತಾಂಡಪ್ಪ ಮಣ್ಣಮ್ಮನವರ, ಪ್ರಕಾಶ ಈಳಿಗೇರ, ರಾಜೇಶ ಚವ್ಹಾಣ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಮಹೇಶ ಬಣಕಾರ ಇದ್ದರು.ಮುಂದುವರಿದ ಸಭೆ:ಕಂದಾಯ, ಅಬಕಾರಿ, ಹೆಸ್ಕಾಂ, ಸಾರಿಗೆ, ಕಾರ್ಮಿಕ, ಶಿಕ್ಷಣ ಸೇರಿದಂತೆ ಪ್ರಮುಖ 10 ಇಲಾಖೆಗಳಿಗೆ ಸೀಮಿತವಾದ ಚರ್ಚೆ ಕೈಗೊಳ್ಳಲು ಫೆ. 27ರಂದು ಮಧ್ಯಾಹ್ನ 12 ಗಂಟೆಗೆ ಮುಂದುವರಿದ ಕೆಡಿಪಿ ಸಭೆ ನಡೆಸಲು ನಿರ್ಧರಿಸಲಾಯಿತು.