-ನ್ಯಾಯ ಒದಗಿಸಿ -ಸಂಬಂಧಿಕನಿಂದಲೇ ಕಿಡ್ನಾಪ್, ಅತ್ಯಾಚಾರ -ಬಂಧಿತ ವ್ಯಕ್ತಿಯಿಂದ ತಪ್ಪೊಪ್ಪಿಗೆ
-ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಕನ್ನಡಪ್ರಭ ವಾರ್ತೆ ಮಾಗಡಿ
ಯುವಕನೊಬ್ಬ ನಾಲ್ಕು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ, ಕೊಲೆಗೈದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ಪ್ರಕರಣದ ಸಂಬಂಧ ಮೃತ ಬಾಲಕಿಯ ಸಂಬಂಧಿ ಬೆಂಗಳೂರಿನ ಗೌರಿಪಾಳ್ಯದ ಇರ್ಫಾನ್ ಖಾನ್ ವಿರುದ್ಧ ಮಾಗಡಿ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಇರ್ಫಾನ್ ಆಗಾಗ ಬಾಲಕಿಯ ಮನೆಗೆ ಬಂದು ಹೋಗುತ್ತಿದ್ದನು. ಅದೇ ರೀತಿ ಜು.20 ರಂದು ಮನೆಗೆ ಬಂದಿದ್ದ ಆತ, ಬಾಲಕಿಗೆ ಐಸ್ ಕ್ರೀಂ ಕೊಡಿಸುವುದಾಗಿ ತನ್ನ ಸ್ಕೂಟರ್‌ನಲ್ಲಿ ಕರೆದೊಯ್ದಿದ್ದಾನೆ. ಸಂಜೆ 7 ಗಂಟೆಯಾದರೂ ಮಗು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಪೋಷಕರು ವಿಚಾರಿಸಿದಾಗ, ಇರ್ಫಾನ್ ಖಾನ್ ಬಾಲಕಿಯನ್ನ ಕರೆದೊಯ್ಯುತ್ತಿದ್ದ ಬಗ್ಗೆ ಸ್ಥಳೀಯರು ತಿಳಿಸಿದ್ದರು.ಬಳಿಕ ಇರ್ಫಾನ್‌ಗೆ ಫೋನ್ ಮಾಡಿದ ಫೋಷಕರು ಮಗು ಬಗ್ಗೆ ವಿಚಾರಿಸಿದಾಗ ನನಗೇನು ಗೊತ್ತಿಲ್ಲ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇದರಿಂದ ಅನುಮಾನಗೊಂಡ ಪೋಷಕರು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಸೇರಿದಂತೆ, ವಿವಿಧ ಮೂಲಗಳನ್ನು ಆಧರಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿ ಬೆಂಗಳೂರು-ಮಾಗಡಿ ರಸ್ತೆಯ ತಿಪ್ಪಗೊಂಡನಹಳ್ಳಿ ಓಡಾಡಿರುವುದನ್ನು ಗಮನಿಸಿ, ಸುತ್ತಮುತ್ತ ಹುಡುಕಾಡಿದಾಗ ರಸ್ತೆ ಬದಿಯ ಪೊದೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.ಕಲಾಸಿಪಾಳ್ಯದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಆರೋಪಿಗೆ ಗಲ್ಲು ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಬೆಂಗಳೂರಿನ ಕೆಂಗೇರಿ ನಿವಾಸಿ ಇರ್ಫಾನ್ ಖಾನ್‌ನನ್ನು ಕೂಡಲೇ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಸಾವಿರಾರು ಮುಸ್ಲಿಂ ಬಾಂಧವರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹಳೆ ಮಸೀದಿಯಿಂದ ಕಲ್ಯಾಗೇಟ್ ವೃತ್ತದ ಮೂಲಕ ತಾಲೂಕು ಕಚೇರಿವರೆಗೂ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಇಲ್ಲವಾದರೆ ನಮಗೊಪ್ಪಿಸಬೇಕೆಂದು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಶಾಸಕ ಮಂಜುನಾಥ್ ಭೇಟಿ:
ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎ. ಮಂಜುನಾಥ್ ಬಾಲಕಿ ಮನೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಂತಹ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಬೇಕು. ಗಾಂಜಾ ಹಾಗೂ ಕುಡಿದ ಅಮಲಿನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರು ಗಾಂಜಾ ಮಾರಾಟಗಾರರಿಗೆ ಭಯ ಇಲ್ಲದಂತಾಗಿದೆ. ಕಾನೂನಿನಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಲಕಿ ಸಾವಿಗೆ ನ್ಯಾಯ ಕೊಡುವುದರ ಜೊತೆಗೆ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.