ವರ್ತಮಾನದಲ್ಲಿ ಕಾಣೆಯಾಗುತ್ತಿರುವ ಶಾಸನಗಳು

KannadaprabhaNewsNetwork | Published : May 1, 2024 1:16 AM

ಸಾರಾಂಶ

ಶಾಸನ ಅಧ್ಯಯನಕಾರರು ಪೂರ್ವಾಗ್ರಹ ಪೀಡಿತರಾಗಿ ಅಧ್ಯಯನ ಮಾಡಬಾರದು ಮತ್ತು ಶಾಸನ ರಚನೆ ಕಾಲದ ಹಿನ್ನೆಲೆಯಲ್ಲಿ ಅವುಗಳನ್ನು ಮರುಮೌಲ್ಯೀಕರಣ ಮಾಡುವ ಅವಶ್ಯಕತೆ ಇದೆ.

ಧಾರವಾಡ:

ವರ್ತಮಾನ ಕಾಲದಲ್ಲಿ ಅನೇಕ ಶಾಸನಗಳು ಕಾಣೆಯಾಗುತ್ತಿವೆ. ಅವುಗಳನ್ನು ಸಂರಕ್ಷಿಸಿ ಅಧ್ಯಯನಿಸುವ ಕಾರ್ಯ ವಿಳಂಬವಾಗಬಾರದು ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್‌ ಹೇಳಿದರು.

ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತು, ಜನತಾ ಶಿಕ್ಷಣ ಸಮಿತಿ ಮತ್ತು ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ಜಂಟಿಯಾಗಿ ಆಯೋಜಿಸಿಸಿದ್ದ ಎರಡು ದಿನಗಳ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಮೊದಲ ಮಹಾಧಿವೇಶನದ ಸಮಾರೋಪದಲ್ಲಿ ಮಾತನಾಡಿದ ಅವರು, ಶಾಸನ ಅಧ್ಯಯನಕಾರರು ಪೂರ್ವಾಗ್ರಹ ಪೀಡಿತರಾಗಿ ಅಧ್ಯಯನ ಮಾಡಬಾರದು ಮತ್ತು ಶಾಸನ ರಚನೆ ಕಾಲದ ಹಿನ್ನೆಲೆಯಲ್ಲಿ ಅವುಗಳನ್ನು ಮರುಮೌಲ್ಯೀಕರಣ ಮಾಡುವ ಅವಶ್ಯಕತೆ ಇದೆ ಎಂದರು.

ಧಾರವಾಡದ ಪತ್ರಾಗಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಯಲಿಗಾರ ಮಾತನಾಡಿ, ಪತ್ರಾಗಾರ ಇಲಾಖೆಯ ಮೂಲಕ ಐತಿಹಾಸಿಕ ಆಕರಗಳ ಸಂಗ್ರಹ ಮತ್ತು ಸಂರಕ್ಷಣೆ ಮಾಡಲಾಗುತ್ತಿದೆ. ಇದಕ್ಕೆ ಯುವ ಪಡೆಗಳು ನಿರ್ಮಾಣವಾಗಬೇಕು ಎಂದು ಹೇಳಿದರು..

ಸಮ್ಮೇಳನದ ಸರ್ವಾಧ್ಯಕ್ಷ, ಹಂಪಿಯ ಕನ್ನಡ ವಿವಿ ಕುಲಪತಿ ಡಾ. ಡಿ.ವಿ ಪರಮಶಿವಮೂರ್ತಿ ಮಾತನಾಡಿ, ಯುವ ಮನಸ್ಸುಗಳಿಂದ ಶಾಸನಗಳ ಹುಡುಕುವಿಕೆ ಹೆಚ್ಚಾಗಬೇಕು, ಸಂಶೋಧಕರಿಂದ ಹೆಚ್ಚೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆ ಆಗಬೇಕು. ಮಂಡಿತ ಲೇಖನಗಳನ್ನು ವಾರ್ಷಿಕ ಸಂಚಿಕೆಯಲ್ಲಿ ಪ್ರಕಟಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಾಸನ ಸಂಶೋಧಕಿ ಹನುಮಾಕ್ಷಿ ಗೋಗಿ, ಈ ಸಮ್ಮೇಳನ ಯಶಸ್ವಿಯಾಗಲು ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಶ್ರಮ ಮತ್ತು ಜನತಾ ಶಿಕ್ಷಣ ಸಮಿತಿಯ ಸಹಾಯ ಸ್ಮರಣೀಯ ಎಂದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಎಸ್.ಕೆ. ಮೇಲಕಾರ್ ಸ್ವಾಗತಿಸಿದರು. ಡಾ. ಎಂ. ಕೊಟ್ರೇಶ, ಡಾ. ದೇವರಕೊಂಡಾರೆಡ್ಡಿ, ಡಾ. ಆರ್. ಶೇಜೇಶ್ವರ, ಡಾ. ಎಸ್.ಸಿ. ಪಾಟೀಲ್, ಪ್ರೊ. ಎಸ್.ಬಿ. ಹಿರೇಮಠ, ಡಾ. ಜೆ.ಎಂ. ನಾಗಯ್ಯಾ, ಪ್ರೊ. ಅಮರೇಶ ಯತಗಲ್, ಡಾ. ಲೋಕೇಶ, ಡಾ. ಸೂರಜ್ ಜೈನ್, ಮಹಾವೀರ ಉಪಾದ್ಯೆ, ಡಾ. ಬಿ.ಎನ್. ಭಾವಿ, ಡಾ. ಧನವಂತ ಹಾಜವಗೋಳ, ಡಾ. ಆರ್.ವಿ. ಚಿಟಗುಪ್ಪಿ, ಡಾ. ಎಚ್. ವಿಷ್ಣುವರ್ಧನ ಇದ್ದರು.

Share this article