ರಾಜ್ಯದಲ್ಲಿ ವಕ್ಫ್‌ ಕಾನೂನು ದುರುಪಯೋಗ - ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Nov 01, 2024, 12:34 AM IST
ಪೋಟೋ ಇದೆ. | Kannada Prabha

ಸಾರಾಂಶ

ರಾಜ್ಯದಲ್ಲಿ ವಕ್ಫ್‌ ಕಾನೂನು ದುರುಪಯೋಗ ಆಗುತ್ತಿದ್ದು, ಕಂದಾಯ ಕಾನೂನು ಕಡೆಗಣಿಸಿ ವಿನಾಕಾರಣ ಇಡೀ ರಾಜ್ಯದ ರೈತರ ಸಾಗುವಳಿ ಜಮೀನುಗಳಿಗೆ ವಕ್ಫ್‌ ಪ್ರಾಪರ್ಟಿ ಎಂದು ಮಾಡಲು ಹೊರಟಿದ್ದಾರೆ. ಸರ್ಕಾರ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದು, ರಾಜ್ಯದ ಸಮಗ್ರ ದಾಖಲೆಗಳನ್ನು ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಶಿಗ್ಗಾಂವಿ: ರಾಜ್ಯದಲ್ಲಿ ವಕ್ಫ್‌ ಕಾನೂನು ದುರುಪಯೋಗ ಆಗುತ್ತಿದ್ದು, ಕಂದಾಯ ಕಾನೂನು ಕಡೆಗಣಿಸಿ ವಿನಾಕಾರಣ ಇಡೀ ರಾಜ್ಯದ ರೈತರ ಸಾಗುವಳಿ ಜಮೀನುಗಳಿಗೆ ವಕ್ಫ್‌ ಪ್ರಾಪರ್ಟಿ ಎಂದು ಮಾಡಲು ಹೊರಟಿದ್ದಾರೆ. ಸರ್ಕಾರ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದು, ರಾಜ್ಯದ ಸಮಗ್ರ ದಾಖಲೆಗಳನ್ನು ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಕ್ಫ್ ಕಾನೂನು ದುರುಪಯೋಗ ಆಗುತ್ತಿದೆ. ಕಂದಾಯ ಕಾನೂನು ಕಡೆಗಣಿಸಿದ್ದಾರೆ. ಭೂಮಿ ವಿಚಾರದಲ್ಲಿ ಕಂದಾಯ ಕಾನೂನು ದಾಖಲೆಗಳೇ ಅಂತಿಮ. ಆದರೆ, ಆ ಕಾನೂನು ಕಡೆಗಣಿಸಿ ಅದಾಲತ್ ಪ್ರಕಾರ ಆಗಿದ್ದೇ ಅಂತಿಮ ಅಂತ ಮಾಡುತ್ತಿದ್ದಾರೆ. ಹಿಂದೆ ಇಂಥ ಪ್ರಕರಣ ಆದಾಗ ಯಾರ್ಯಾರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರಿಗೆಲ್ಲ ನ್ಯಾಯ ಸಿಕ್ಕಿದೆ. ಯಾರೋ ಒಬ್ಬರು ಅರ್ಜಿ ಹಾಕಿದರೆ ಇಡೀ ರಾಜ್ಯದ ರೈತರ ಆಸ್ತಿಗೆ ವಕ್ಫ್‌ ಆಸ್ತಿಯೆಂದು ರೈತರಿಗೆ ನೋಟಿಸ್ ನೀಡುವ ಮೂಲಕ ಸರ್ಕಾರದಿಂದ ಅರಾಜಕತೆ, ಗಾಬರಿ ಉಂಟು ಮಾಡುವ ಕೆಲಸ ನಡೆದಿದೆ. ಇದೊಂದು ಬೇಜವಾಬ್ದಾರಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.ಗೆಜೆಟ್ ನೋಟಿಫಿಕೇಶನ್ ಆದ ಬಳಿಕ ತರಾತುರಿಯಲ್ಲಿ ಡಿಸಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಜಿಲ್ಲಾಧಿಕಾರಿಗೆ ಅಷ್ಟಾದರೂ ಜ್ಞಾನ ಇರಬೇಕಲ್ಲವೇ? ಮೊದಲು ಇದರ ಬಗ್ಗೆ ಸಮಗ್ರವಾಗಿ ಪರಿಶೀಲನೆ ಆಗಬೇಕು. ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದ ಗಲಾಟೆಗೆ ಸರ್ಕಾರವೇ ನೇರ ಕಾರಣ. ಜನರ ಮೇಲೆ‌ ಕಾನೂನು ಹೇರುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಜೀವನ ನಡೆಸುತ್ತಾರೆ. ಸೌಹಾರ್ದತೆ ಕಲಕುವ ಕೆಲಸ ನಡೆದಿದೆ. ಈ ಸರ್ಕಾರ ಬಂದಾಗಿನಿಂದ ತುಷ್ಟೀಕರಣ ನಡೆದಿದೆ. ಮುಖ್ಯಮಂತ್ರಿಗಳು ರೈತರಿಗೆ ನೀಡಿರುವ ನೋಟಿಸ್‌ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಆದರೆ, ಇನ್ನೂ ವಾಪಸ್ ಪಡೆಯುವ ಕೆಲಸ ಆಗಿಲ್ಲ. ಸಿಎಂ ನೇರವಾಗಿ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು. ಈಗ ಒಂದು ಕಡೆ ಎಲ್ಲಿಯಾದರೂ ಪೂಜೆ ಮಾಡಿ ನಮ್ಮದೇ ಭೂಮಿ ಅಂದರೆ ಹೇಗೆ? ಇಲ್ಲಿಯ ಕೃಷ್ಣಾನಗರ ತಾಂಡಾ ವಕ್ಫ್‌ ಪ್ರಾಪರ್ಟಿ ಅಂತ ಮಾಡಿದ್ದಾರೆ. ಸರ್ಕಾರಕ್ಕೆ ಕನಿಷ್ಠ ತಿಳಿವಳಿಕೆಯೂ ಇಲ್ಲ. ನಾಯಕತ್ವ ಭದ್ರಪಡಿಸಿಕೊಳ್ಳಲು‌ ಮುಖ್ಯಮಂತ್ರಿ ಅವರಿಂದ ತುಷ್ಟೀಕರಣ ರಾಜಕೀಯ ನಡೆದಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಲೆಕ್ಷನ್ ಇರಲಿ, ಇರದೇ ಇರಲಿ ತುಷ್ಟೀಕರಣ ನಡೆದೇ ಇದೆ. ಈಗ ಉಪ ಚುನಾವಣೆಯಲ್ಲಿ ಲಾಭ‌ ಪಡೆಯುವ ಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು. ಶಕ್ತಿ ಯೋಜನೆ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಗ್ಯಾರಂಟಿ ಯೋಜನೆಗಳು ಅವತ್ತು ಚುನಾವಣೆಗಾಗಿ ರಾಜಕೀಯ ಲಾಭಕ್ಕಾಗಿ ಮಾಡಿದ್ದು, ಇದಕ್ಕೆ ಯಾವುದೇ ಪೂರ್ವ ತಯಾರಿ ಇರಲಿಲ್ಲ. ಜನಪ್ರಿಯತೆಗೆ ಮಾಡಿದ್ದಾರೆ. ಈಗ ಅವರ ಹಣಕಾಸಿನ ಪರಿಸ್ಥಿತಿ ಸರಿ ಇಲ್ಲ. ಅವರ ಶಾಸಕರೇ ಅವರನ್ನು ದೂರುತ್ತಿದ್ದಾರೆ. ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಗ್ಯಾರಂಟಿ ಪರಿಷ್ಕರಣೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ