ಕಾಲುವೆ ನೀರಿಗಾಗಿ ಕರೆ ನೀಡಿದ ಗಂಗಾವತಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

KannadaprabhaNewsNetwork | Published : Apr 9, 2025 12:33 AM

ಸಾರಾಂಶ

ರೈತರ ಜೀವನಾಡಿ ತುಂಗಭದ್ರಾ ನೀರು ರೈತರ ಬೆಳೆಗಳಿಗೆ, ಸಾರ್ವಜನಿಕರಿಗೆ ಕುಡಿಯಲು ನೀಡಬೇಕೆ ಹೊರತು ಕಾರ್ಖಾನೆಗಳ ವ್ಯಾಪಾರಕ್ಕಲ್ಲ. ಕಾಲುವೆಗೆ ನೀರು ಬಿಡುವಂತೆ ಕೇಳುತ್ತಿರುವುದು ಒಬ್ಬರ ಸ್ವಾರ್ಥಕ್ಕಲ್ಲ. ರೈತರ ಹಿತಕ್ಕಾಗಿ ಮತ್ತು ಅವರ ಬೆಳೆಗಳ ರಕ್ಷಣೆಗಾಗಿ. ಅನ್ನದಾತರಿದ್ದರೆ ಮಾತ್ರ ನಮಗೆ ಊಟ, ಇಲ್ಲದಿದ್ದರೆ ಉಪವಾಸ.

ಗಂಗಾವತಿ:

ತುಂಗಭದ್ರಾ ಎಡದಂಡೆ ಕಾಲುವೆಗೆ ಏ. 20ರ ವರೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ, ಕಾರ್ಮಿಕ, ಕಟ್ಟಡ ಕಾರ್ಮಿಕ, ವರ್ತಕರು ಸೇರಿದಂತೆ ಕನ್ನಡಪರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಗಂಗಾವತಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಘಟನೆಗಳು ಸಿಬಿಎಸ್‌ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು.

ಬೆಳಗ್ಗೆ 11 ಗಂಟೆ ವರೆಗೆ ಅಂಬೇಡ್ಕರ್, ಪಂಪಾನಗರ, ಬಸವಣ್ಣ, ಗಾಂಧಿ, ಮಹಾವೀರ, ಸಿಬಿಎಸ್ ವೃತ್ತ ವರೆಗಿನ ಎಲ್ಲ ಅಂಗಡಿ ಮುಗ್ಗಂಟುಗಳು ಭಾಗಶಃ ಬಂದ್‌ ಆಗಿದ್ದವು. ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಅಂಗಡಿ ಬಾಗಿಲು ಮುಚ್ಚಿ ಬಂದ್‌ ಬೆಂಬಲಿಸಿದರು. ತರಕಾರಿ ಬಂಡಿ, ಡಬ್ಬಾಂಗಡಿ, ಬಸ್‌, ಆಟೋ, ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಇತ್ತು. ಸಾರ್ವಜನಿಕ ಸಂಚಾರವೂ ಸಾಮಾನ್ಯವಾಗಿತ್ತು.

ಪ್ರತಿಭಟನೆ:

ವಿವಿಧ ಸಂಘಟನೆಗಳು ನಗರದ ಸಿಬಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಏ. 20ರ ವರೆಗೆ ತುಂಗಾಭದ್ರಾ ಎಡದಂಡೆ ಕಾಲುವೆ ನೀರು ಹರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಿಂದ ಕೊಪ್ಪಳ, ಕನಕಗಿರಿ, ರಾಯಚೂರು, ಗಂಗಾವತಿ ನಗರದ ಒಳಗ ತೆರಳು ರಸ್ತೆಗಳಲ್ಲಿ ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಯಿತು.‌ ಪೊಲೀಸರು ಸಂಚಾರಿ ದಟ್ಟಣೆ ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರೈತರ ಜೀವನಾಡಿ ತುಂಗಭದ್ರಾ ನೀರು ರೈತರ ಬೆಳೆಗಳಿಗೆ, ಸಾರ್ವಜನಿಕರಿಗೆ ಕುಡಿಯಲು ನೀಡಬೇಕೆ ಹೊರತು ಕಾರ್ಖಾನೆಗಳ ವ್ಯಾಪಾರಕ್ಕಲ್ಲ ಎಂದು ಉದ್ಯಮಿ ನೆಕ್ಕಂಟಿ ಸೂರಿಬಾಬು ಆಕ್ರೋಶ ವ್ಯಕ್ತಪಡಿಸಿದರು. ಕಾಲುವೆಗೆ ನೀರು ಬಿಡುವಂತೆ ಕೇಳುತ್ತಿರುವುದು ಒಬ್ಬರ ಸ್ವಾರ್ಥಕ್ಕಲ್ಲ. ರೈತರ ಹಿತಕ್ಕಾಗಿ ಮತ್ತು ಅವರ ಬೆಳೆಗಳ ರಕ್ಷಣೆಗಾಗಿ. ಅನ್ನದಾತರಿದ್ದರೆ ಮಾತ್ರ ನಮಗೆ ಊಟ, ಇಲ್ಲದಿದ್ದರೆ ಉಪವಾಸ. ಹಾಗಾಗಿ ಸಚಿವರು, ಶಾಸಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾಲುವೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಶರಣೇಗೌಡ ಕೆಸರಹಟ್ಟಿ, ಅನ್ನದಾತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶರಣಪ್ಪ‌ ಕೊತ್ವಾಲ, ವರ್ತಕರ ಸಂಘದ ಗಾಳಿ ಶಿವಪ್ಪ, ಅಖಿಲ ಭಾರತ

ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಎ. ಹುಲಗಪ್ಪ, ಎ.ಎಲ್. ತಿಮ್ಮಣ್ಣ, ಐಹೊಳೆ ಹನುಮಂತ, ಶಿವನಗೌಡ, ರುದ್ರಪ್ಪ ಸೇರಿ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Share this article