ಚಿಕ್ಕಮಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

KannadaprabhaNewsNetwork | Published : May 6, 2025 12:18 AM

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ನರಮೇಧ, ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಸೋಮವಾರ ಕರೆ ನೀಡಿದ್ದ ಚಿಕ್ಕಮಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಲೆನಾಡಲ್ಲಿ ಮಾತ್ರ ಬಂದ್‌, ಬಯಲುಸೀಮೆಯಲ್ಲಿ ಇಲ್ಲ । ಕಾಫಿನಾಡಲ್ಲಿ ಬಿಜೆಪಿ ಕಾರ್ಯಕರ್ತರ ಬಂಧನ, ಬಿಡುಗಡೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ನರಮೇಧ, ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಸೋಮವಾರ ಕರೆ ನೀಡಿದ್ದ ಚಿಕ್ಕಮಗಳೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಬಂದ್‌ಗೆ ಯಾರೂ ಕೂಡ ಸ್ಪಂದಿಸಲಿಲ್ಲ. ಆದರೆ, ಮಲೆನಾಡಿನ ತಾಲೂಕುಗಳಾದ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಹಾಗೂ ಎನ್‌ಆರ್‌ ಪುರ, ಕಳಸ ತಾಲೂಕುಗಳಲ್ಲಿ ಮಾತ್ರ ಬಂದ್‌ ವಾತಾವರಣ ಕಂಡುಬಂದಿತಾದರೂ ಜನ ಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಬಂದ್‌ ಹಿನ್ನಲೆ ಮೆರವಣಿಗೆ ನಡೆಸಲು ಯತ್ನಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಸಿ. ಕಲ್ಮರುಡಪ್ಪ, ವಿಎಚ್‌ಪಿ ಮುಖಂಡರಾದ ರಂಗನಾಥ್‌, ಪ್ರದೀಪ್‌, ಬಿಜೆಪಿ ಮುಖಂಡ ಕೋಟೆ ರಂಗನಾಥ್ ಸೇರಿದಂತೆ ಸುಮಾರು 20 ಮಂದಿ ಕಾರ್ಯಕರ್ತರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡು ನಂತರ ಮಧ್ಯಾಹ್ನದ ವೇಳೆಗೆ ಬಿಡುಗಡೆಗೊಳಿಸಿದರು.

ಚಿಕ್ಕಮಗಲೂರು ಜಿಲ್ಲಾ ಕೇಂದ್ರದ ಕೆಲವು ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳು ಮಾತ್ರ ಬಂದ್‌ ಆಗಿದ್ದವು. ಇನ್ನುಳಿದಂತೆ ಹೋಟೆಲ್‌, ಪೆಟ್ರೋಲ್‌ ಬಂಕ್‌, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಬಸ್‌, ಆಟೋ ಸಂಚಾರ ಇದ್ದರಿಂದ ಜನರಿಗೆ ಬಂದ್‌ನಿಂದ ಯಾವುದೇ ರೀತಿ ತೊಂದರೆಯಾಗಲಿಲ್ಲ.

ಬಂದ್‌ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯದಿಂದ ಮೆರವಣಿಗೆಯಲ್ಲಿ ಹೊರಟು ಹನುಮಂತಪ್ಪ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲು ಪ್ರತಿಭಟನಾಕಾರರು ಉದ್ದೇಶಿಸಿದ್ದರು. ಪೂರ್ವ ನಿಗದಿಯಂತೆ ಮೆರವಣಿಗೆ ಹೊರಡುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡು ಮಧ್ಯಾಹ್ನದ ವೇಳೆಗೆ ಬಿಡುಗಡೆಗೊಳಿಸಿದರು.

ಮೂಡಿಗೆರೆ ಪಟ್ಟಣ ಬಂದ್‌ ಆಗಿರಲಿಲ್ಲ, ಬದಲಿಗೆ ಗೋಣಿಬೀಡು, ಜನ್ನಾಪುರ, ಬಾಳೂರು, ಕೊಟ್ಟಿಗೆಹಾರ ಹಾಗೂ ಬಣಕಲ್‌ನಲ್ಲಿ ಬಂದ್‌ಗೆ ಉತ್ತಮ ಸ್ಪಂದನೆ ಸಿಕ್ಕಿತು. ಶೇ. 80ರಷ್ಟು ಬಂದ್‌ ಆಗಿತ್ತು. ಅಂಗಡಿ ಮುಂಗಟ್ಟು ಹೊರತುಪಡಿಸಿ ಇನ್ನುಳಿದಂತೆ ಹೋಟೆಲ್‌ಗಳು ತೆರೆದಿದ್ದವು, ಬಸ್‌ ಸಂಚಾರ ಎಂದಿನಂತೆ ಇತ್ತು.

ಶೃಂಗೇರಿ ತಾಲೂಕು ಕೇಂದ್ರದಲ್ಲಿ ಅಂಗಡಿಗಳು ಮಾತ್ರ ಮುಚ್ಚಿದ್ದವು. ಇನ್ನುಳಿದಂತೆ ಬಸ್‌, ಆಟೋ ಸಂಚಾರ ಎಂದಿನಂತೆ ಇತ್ತು. ಬಂದ್‌ ಹಿನ್ನೆಲೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಎನ್‌.ಆರ್‌.ಪುರದಲ್ಲಿ ಅಂಗಡಿ ಹೋಟೆಲ್‌ ಸಂಪೂರ್ಣ ಬಂದ್‌ ಆಗಿದ್ದವು. ಆಟೋಗಳು ರಸ್ತೆಗೆ ಇಳಿಯಲಿಲ್ಲ, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಇಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಡಿ.ಎನ್‌. ಜೀವರಾಜ್‌ ಪಾಲ್ಗೊಂಡಿದ್ದರು. ಕೊಪ್ಪ ತಾಲೂಕು ಕೇಂದ್ರ ಸೇರಿದಂತೆ ಜಯಪುರ, ಹರಿಹರಪುರದಲ್ಲೂ ಅಂಗಡಿಗಳು ಮುಚ್ಚಿದ್ದವು. ಹಣ್ಣು, ತರಕಾರಿ, ಬೇಕರಿ, ಹೋಟೆಲ್‌ ಸೇರಿ ಎಲ್ಲಾ ವಹಿವಾಟು ಬಂದ್‌ ಆಗಿದ್ದವು.

ಒಟ್ಟಾರೆ ಜಿಲ್ಲಾಡಳಿತ ಅನುಮತಿಯ ನಿರಾಕರಣೆ ನಡುವೆ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳ ಕರೆ ನೀಡಿದ್ದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್‌ ಹಿನ್ನಲೆಯಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

Share this article