ಅಹಿಂದ ನೇತೃತ್ವದ ಶಿಕಾರಿಪುರ ಬಂದ್‌ ಕರೆಗೆ ಮಿಶ್ರ ಪ್ರತಿಕ್ರಿಯೆ

KannadaprabhaNewsNetwork | Published : Sep 27, 2024 1:29 AM

ಸಾರಾಂಶ

ಸಿದ್ದರಾಮಯ್ಯನವರ ವಿರುದ್ಧದ ತನಿಖೆಗೆ ಬಿಜೆಪಿ ಜೆಡಿಎಸ್ ಕುಮ್ಮಕ್ಕು ಕಾರಣ ಎಂದು ಶಿಕಾರಿಪುರ ತಾಲೂಕು ಅಹಿಂದ ಯುವಘಟಕದ ಕರೆಗೆ ಬಸ್ ನಿಲ್ದಾಣ ಸುತ್ತಮುತ್ತ ಅಂಗಡಿ ಮುಂಗಟ್ಟು ಮುಚ್ಚಿದ್ದವು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರ ದ್ವೇಷದ ರಾಜಕಾರಣವನ್ನು ಖಂಡಿಸಿ ಗುರುವಾರ ತಾಲೂಕು ಅಹಿಂದ ಯುವ ಘಟಕದ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಶಿಕಾರಿಪುರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬಂದ್ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ವಿರಳವಾಗಿ ಕೆಲ ಬಸ್ ಮಾತ್ರ ಸಂಚರಿಸಿದರು. ಅಂಗಡಿ ಮುಂಗಟ್ಟು ಬಸ್ ನಿಲ್ದಾಣ ಸುತ್ತಮುತ್ತ ಬಂದ್ ಕರೆಗೆ ಓಗೊಟ್ಟು ಮುಚ್ಚಲಾಗಿದ್ದು, ಹೊರವಲಯದಲ್ಲಿ ತೆರೆದಿದ್ದವು. ಕೆಲ ಹೋಟೆಲ್ ಗಳು ಬಾಗಿಲು ತೆರೆದು ದೈನಂದಿನ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು, ಬಹುತೇಕ ಹೋಟೆಲ್ ಮಾಲೀಕರು ಬಾಗಿಲು ಮುಚ್ಚಿ ಬೆಂಬಲ ಸೂಚಿಸಿದ್ದರು. ಶಾಲಾ-ಕಾಲೇಜುಗಳು ಬ್ಯಾಂಕ್ ಮತ್ತಿತರ ಸರ್ಕಾರಿ ಖಾಸಗಿ ವಾಣಿಜ್ಯ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು, ಗ್ರಾಹಕರ ಸಮಸ್ಯೆ ಎದುರಿಸುತ್ತಿದ್ದವು. ಒಟ್ಟಿನಲ್ಲಿ ಬಂದ್ ಕರೆಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬರುತ್ತಿತ್ತು.ಬಸ್ ನಿಲ್ದಾಣದ ಬಳಿ ನಡೆದ ಅಹಿಂದ ಮುಖಂಡರ ಪ್ರತಿಭಟನಾ ಸಭೆಯಲ್ಲಿ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ ಮಾತನಾಡಿ, ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಕಳಂಕ ರಹಿತವಾಗಿ, ಕಪ್ಪುಚುಕ್ಕೆ ಇಲ್ಲದ ರೀತಿ ಸಂಪೂರ್ಣ 5 ವರ್ಷ ಉತ್ತಮ ಆಡಳಿತ ನಡೆಸಿದ್ದು, ಈ ಬಾರಿ ಮುಖ್ಯಮಂತ್ರಿಯಾಗಿ ಜಾರಿಗೊಳಿಸಿದ 5 ಗ್ಯಾರೆಂಟಿ ಯೋಜನೆಯು ರಾಜ್ಯದ ಎಲ್ಲ ಕುಟುಂಬಕ್ಕೆ, ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆ. ಇದರಿಂದಾಗಿ ಸಿದ್ದರಾಮಯ್ಯನವರ ಜನಪ್ರಿಯತೆ ಹೆಚ್ಚಾಗಿದ್ದು, ಸಹಿಸಲಾಗದೆ ವಿರೋಧಿ ಬಿಜೆಪಿ ಜೆಡಿಎಸ್ ಮುಖಂಡರು ವಿನಾಕಾರಣ ಆರೋಪ ಹೊರಿಸಿ ಆಡಳಿತ ನಡೆಸಲು ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖಂಡ ಭಂಡಾರಿ ಮಾಲತೇಶ್ ಮಾತನಾಡಿ, ವಿಪಕ್ಷಗಳು ಸಿದ್ದರಾಮಯ್ಯನವರನ್ನು ಕಟ್ಟಿಹಾಕದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ 20-30 ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಷಡ್ಯಂತ್ರ ಹಣೆಯುತ್ತಿದ್ದಾರೆ ಎಂದು ಟೀಕಿಸಿ, ಪಟ್ಟಣದ ಹೊರವಲಯದಲ್ಲಿ ಟೋಲ್‌ಗೇಟ್ ನಿರ್ಮಿಸಿ ಇದೀಗ ರಾಜ್ಯ ಸರ್ಕಾರ ಕಾರಣ ಎಂದು ಜನಸಾಮಾನ್ಯರನ್ನು ದಿಕ್ಕುತಪ್ಪಿಸಲಾಗುತ್ತಿದೆ. ಕ್ಷೇತ್ರದ ಶಾಸಕರಾಗಿ ಟೋಲ್‌ಗೇಟ್ ತೆಗೆಸಲು ಸಾಧ್ಯವಿಲ್ಲದಿದ್ದಲ್ಲಿ ರಾಜೀನಾಮೆ ನೀಡಿ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಅಹಿಂದ ಯುವ ಘಟಕದ ಅಧ್ಯಕ್ಷ ನಗರದ ಮಾಲತೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳದ, ಮುಖಂಡ ಗೋಣಿ ಮಾಲತೇಶ್, ಉಳ್ಳಿ ದರ್ಶನ್, ಗೋಣಿ ಪ್ರಕಾಶ್, ಪಾಲಾಕ್ಷಪ್ಪ, ನಗರದ ರವಿಕಿರಣ್, ರಾಘವೇಂದ್ರ ನಾಯ್ಕ, ಶಿವು ಹುಲ್ಮಾರ್, ವೀರೇಶ್, ಸುರೇಶ್ ಹೊನ್ನಾವರ, ನಿಂಗಪ್ಪ ನ್ಯಾಯವಾದಿ, ಪ್ರಕಾಶ್ ಸಾಲೂರು, ರಂಗಪ್ಪ ಮತ್ತಿತರರು ಹಾಜರಿದ್ದರು.ಬಿಎಸ್‌ವೈ ಕುಟುಂಬ ಜೈಲಿಗೆ ಹೋಗುವ ಕಾಲ ದೂರವಿಲ್ಲ

ಪುರಸಭಾ ಸದಸ್ಯರಾಗಿ ಸಾರ್ವಜನಿಕ ಕ್ಷೇತ್ರ ಪ್ರವೇಶಿಸಿದ ಯಡಿಯೂರಪ್ಪನವರು ಶಾಸಕ, ವಿಪಕ್ಷ ನಾಯಕ, ಮುಖ್ಯಮಂತ್ರಿಯಾಗಿ ದೊರೆತ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮಕ್ಕಳು ಮೊಮ್ಮಕ್ಕಳು ಕುಟುಂಬ ಸದಸ್ಯರು ಅಧಿಕಾರದಲ್ಲಿ ಪಾಲುದಾರರಾಗಿ ಇಂದಿನ ಶಾಸಕ ವಿಜಯೇಂದ್ರ ಪೋರ್ಜರಿ ಸಹಿ ಮೂಲಕ ಜೈಲಿಗೆ ಕಳುಹಿಸಲು ಕಾರಣರಾಗಿದ್ದಾರೆ. ಬಡವರ ನೂರಾರು ಎಕರೆ ಜಮೀನು ಕಬಳಿಸಿದ ಸಂಸದರು ಇಂಡಿಯನ್ ಬುಕ್ ಹೌಸ್ ಮಾಲಿಕರ ಜಮೀನು ಕಬಳಿಸಿ, 100 ದಿನ ಸತ್ಯಾಗ್ರಹ ನಡೆಸಲು ಕಾರಣಕರ್ತರಾಗಿದ್ದಾರೆ. ಅವರ ಹಗರಣವನ್ನು ಬೇರೆಯವರಿಗೆ ಕಟ್ಟಲು ನಿಸ್ಸೀಮರಾಗಿದ್ದಾರೆ ಎಂದು ಹರಿಹಾಯ್ದ ನಾಗರಾಜಗೌಡ, ಶೀಘ್ರದಲ್ಲಿಯೇ ಯಡಿಯೂರಪ್ಪ ಕುಟುಂಬದ ಹಗರಣ ತನಿಖೆ ನಡೆದು ಜೈಲಿಗೆ ಹೋಗುವ ಕಾಲ ದೂರವಿಲ್ಲ ಎಂದು ಟೀಕಿಸಿದ ಅವರು, ಕಡಿಮೆ ಅವಧಿಯಲ್ಲಿ ಬಂದ್ ಕರೆಗೆ ಸ್ಪಂದಿಸಿದ ಎಲ್ಲ ಅಂಗಡಿ ಹೋಟೆಲ್ ಬಸ್ ಮಾಲಿಕರು ಕೂಲಿ ಕಾರ್ಮಿಕರಿಗೆ ಧನ್ಯವಾದ ಸಲ್ಲಿಸಿದರು.

Share this article