ಶಾಸಕ ಬಾಲಕೃಷ್ಣ ಗಂಡಸ್ತನದ ರಾಜಕೀಯ ಮಾಡಿಲ್ಲ: ಮಾಜಿ ಶಾಸಕ ಮಂಜುನಾಥ್

KannadaprabhaNewsNetwork |  
Published : Sep 21, 2024, 01:50 AM IST
20ಮಾಗಡಿ1 : ಮಾಗಡಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶಾಸಕ ಬಾಲಕೃಷ್ಣ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ವಾಗ್ದಾಳಿ ನಡೆಸಿದರು. | Kannada Prabha

ಸಾರಾಂಶ

ಮಾಗಡಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಬಾಲಕೃಷ್ಣ ಅವರು ಗಂಡಸ್ತನದ ರಾಜಕೀಯ ಮಾಡಬೇಕಿತ್ತು, ಜೆಡಿಎಸ್‌ನಲ್ಲಿ ಗೆದ್ದಿದ್ದ ನಾಲ್ವರು ಸದಸ್ಯರನ್ನು ಹಣದ ಆಮಿಷವೊಡ್ಡಿ ಹಿಂದುಳಿದ ವರ್ಗಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ವಾಗ್ದಾಳಿ ನಡೆಸಿದರು. ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

-ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ವಿಚಾರ

-ಹಿಂದುಳಿದ ವರ್ಗದ ಮಹಿಳೆಗೆ ಅನ್ಯಾಯ: ವಾಗ್ದಾಳಿ ಕನ್ನಡಪ್ರಭ ವಾರ್ತೆ ಮಾಗಡಿ

ಮಾಗಡಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಬಾಲಕೃಷ್ಣ ಅವರು ಗಂಡಸ್ತನದ ರಾಜಕೀಯ ಮಾಡಬೇಕಿತ್ತು, ಜೆಡಿಎಸ್‌ನಲ್ಲಿ ಗೆದ್ದಿದ್ದ ನಾಲ್ವರು ಸದಸ್ಯರನ್ನು ಹಣದ ಆಮಷವೊಡ್ಡಿ ಸೆಳೆದುಕೊಂಡು, ನಮ್ಮ ಪಕ್ಷದ ಮಹಿಳೆಯನ್ನು ಸೋಲಿಸುವ ಮೂಲಕ ಹಿಂದುಳಿದ ವರ್ಗಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಗಡಿ ಪುರಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮಾಗಡಿ ಪಟ್ಟಣದ ಜನತೆ ಸ್ಪಷ್ಟ ಬಹುಮತ ನೀಡಿದ್ದರು. 12 ಸದಸ್ಯರ ಜೊತೆಗೆ ಬಿಜೆಪಿ ಸದಸ್ಯೆ, ಎಂಪಿ ಮತ ಸೇರಿ ಒಟ್ಟು 14 ಸದಸ್ಯರ ಬಲ ಹೊಂದಿದ್ದು ನಾವು ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ, ಜೆಡಿಎಸ್‌ ಬೆಂಬಲಿತ ಮೂವರು ಸದಸ್ಯರಿಗೆಗೆ ಅಧ್ಯಕ್ಷ ಹುದ್ದೆಯ ಅಧಿಕಾರ ಹಂಚಿಕೆ ಮಾಡಿಕೊಳ್ಳುತ್ತಿದ್ದೆವು. ಆದರೆ ಶಾಸಕ ಬಾಲಕೃಷ್ಣ ಗಂಡಸ್ತನದ ರಾಜಕೀಯ ಮಾಡದೆ, ನಮ್ಮ ಪಕ್ಷದ ಸದಸ್ಯರಿಗೆ ಹಣದ ಆಸೆ ತೋರಿಸಿ ಅವರಿಂದ ಮತ ಹಾಕಿಸಿಕೊಳ್ಳದೆ ತಟಸ್ಥವಾಗಿ ಉಳಿಸಿಕೊಳ್ಳುವ ಮೂಲಕ ನಮ್ಮ ಅಭ್ಯರ್ಥಿಯನ್ನು ಸೋಲಿಸಿದ್ದು ಈ ಸೋಲನ್ನು ನಾನು ಒಪ್ಪಿಕೊಳ್ಳುತ್ತೇನೆ. ಹಿಂದುಳಿದ ವರ್ಗದ ಮಹಿಳೆಗೆ ಅಧಿಕಾರ ತಪ್ಪಿಸಿದ ಕೀರ್ತಿ ಶಾಸಕ ಬಾಲಕೃಷ್ಣ್ಣರವರಿಗೆ ಸಲ್ಲುತ್ತದೆ ಎಂದು ಆರೋಪಿಸಿದರು.

ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ಧ ಕ್ರಮ:

ಪಕ್ಷಕ್ಕೆ ದ್ರೋಹ ಬಗೆದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಜೆಡಿಎಸ್‌ ಸದಸ್ಯರಾಗಿದ್ದ ರಹಮತ್, ರಾಮು, ಕಾಂತರಾಜು, ಹೇಮಲತಾ ಅವರಿಗೆ ನಾನು ಜೆಡಿಎಸ್ ಜಿಲ್ಲಾಧ್ಯಕ್ಷನಾಗಿ ಚುನಾವಣೆ ದಿನದಂದು ವಿಪ್ ಜಾರಿ ಮಾಡಿದ್ದು ವಿಪ್ ಉಲ್ಲಂಘನೆ ಮಾಡಿರುವ ನಾಲ್ವರು ಸದಸ್ಯರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಪ್ರಕಾರ ವಿಪ್ ಉಲ್ಲಂಘಿಸಿದವರ ಸದಸ್ಯತ್ವ ರದ್ದುಗೊಳಿಸಿ 6 ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಅವರ ವಿರುದ್ಧ ಇಂದಿನಿಂದಲೇ ಕಾರ್ಯಾರಂಭ ಮಾಡುತ್ತೇವೆ. ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ ನಾಲ್ವರು ಸದಸ್ಯರ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ಕೊಡುತ್ತೇನೆ ಎಂದು ಮಾಜಿ ಶಾಸಕ ಮಂಜುನಾಥ್ ಎಚ್ಚರಿಕೆ ನೀಡಿದರು.

ಶಾಸಕರು ಗಂಡಸ್ತನದ ರಾಜಕೀಯ ಮಾಡಲಿ:

ಪಟ್ಟಣದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದರೆ ನೀವು ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲಿ ಆಗ ಯಾರೂ ಶಾಸಕರ ವಿರುದ್ಧ ಮಾತನಾಡುವುದಿಲ್ಲ. ನೀವು ಮಾಡಿರುವುದು ಗಂಡಸ್ತನದ ರಾಜಕೀಯ ಅಲ್ಲ, ಜೆಡಿಎಸ್ ಪಕ್ಷದಿಂದ ಬಿ ಫಾರಂ ನೀಡಿ ಮನೆ ಮನೆಗೆ ತೆರಳಿ ಮತ ಕೇಳಿ ಹಣ ಖರ್ಚು ಮಾಡಿ ಅವರನ್ನು ಗೆಲ್ಲಿಸಿಕೊಂಡು ಬಂದ ಮೇಲೆ ನಮ್ಮ ಪಕ್ಷದ ಸದಸ್ಯರನ್ನು ಎತ್ತಿಕೊಂಡು ಹೋಗಿ ತಮ್ಮ ಮಕ್ಕಳೆಂದು ಅವರಿಗೆ ಮದುವೆ ಮುಂಜಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆಯೂ ಇದೇ ರೀತಿ ಬಾಲಕೃಷ್ಣ ನಮ್ಮ ಪಕ್ಷದ ನಾಲ್ವರು ಸದಸ್ಯರನ್ನು ಹಣ ಆಮಿಷವೊಡ್ಡಿ ಅವರನ್ನು ಕರೆದುಕೊಂಡು ಹೋಗಿ ಅಧಿಕಾರ ಪಡೆದುಕೊಂಡರು ಈಗ ಆ ನಾಲ್ವರ ಸದಸ್ಯರ ರಾಜಕೀಯ ಸ್ಥಿತಿ ಈಗ ಯಾವ ರೀತಿ ಇದೇ ಪಟ್ಟಣದ ಜನತೆಗೆ ಗೊತ್ತಿದೆ. ಸರ್ಕಾರದಿಂದ ಕೊಳ್ಳೆ ಹೊಡೆದ ಹಣವಿದೆ, ಅಧಿಕಾರ ಇದೆ ನೀವು ಹೇಳಿದರೆ ಪೊಲೀಸ್ ಇಲಾಖೆಯವರು ಕೇಳುತ್ತಾರೆ ಎಂಬ ದರ್ಪದಲ್ಲಿ ಪುರಸಭಾ ಚುನಾವಣೆ ನಡೆಸಿ ಗೆಲುವು ಸಾಧಿಸಿದ್ದೀರಾ, ಅಧಿಕಾರ ಹಣ ಶಾಶ್ವತವಾಗಿ ಇರುತ್ತೆ ಎಂದು ಬಾಲಕೃಷ್ಣ ಅಂದುಕೊಂಡಿದ್ದಾರೆ ಮಂಜುನಾಥ್ ವಾಗ್ದಾಳಿ ನಡೆಸಿದರು.

ಇದೇ ವೇಳೆ ಪುರಸಭೆ ಜೆಡಿಎಸ್‌ ಸದಸ್ಯರು ಹಾಗೂ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!