ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ಶಾಸಕ ಸಿಎನ್ ಬಾಲಕೃಷ್ಣ ಎಚ್ಚರಿಕೆ ತಾಲೂಕಿನಲ್ಲಿ ನಿರೀಕ್ಷಿತ ಮಳೆಯಿಲ್ಲದೆ ರೈತರು ಬೆಳೆದಿರುವ ಬೆಳೆಗಳು ಒಣಗುತ್ತಿದ್ದು, ಕೊಳವೆಬಾವಿಗಳಿಗೆ ತ್ರೀ ಫೇಸ್ ಕರೆಂಟ್ ನೀಡದೆ ಹೆಚ್ಚು ಲೋಡ್ ಶೆಡ್ಡಿಂಗ್ ಮಾಡುತ್ತಿದ್ದು ಇದರಿಂದ ರೈತರಿಗೆ ಹೆಚ್ಚು ನಷ್ಟವಾಗುತ್ತಿದೆ. ಇದೇ ರೀತಿ ಮುಂದುವರೆದರೆ ಸರ್ಕಾರ ಹಾಗೂ ಇಂಧನ ಇಲಾಖೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸನ ಸಿ ಎನ್ ಬಾಲಕೃಷ್ಣ ತಿಳಿಸಿದರು. ಹೋಬಳಿಯ ಹುಲಿಕೆರೆ ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವ ವಿಸರ್ಜನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿನಲ್ಲಿ ರೈತ ಕೊಳವೆ ಬಾವಿಗಳಿಗೆ ಗುಣಮಟ್ಟದ ವಿದ್ಯುತ್ ನೀಡುವ ಸಲುವಾಗಿ ಹೋಬಳಿಯ ಕಲ್ಕೆರೆ ಬಳಿ 220 ಕೆವಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣ ಮಾಡಲು ಸರ್ಕಾರ ಹಾಗೂ ಇಂದು ಇಲಾಖೆಗೆ ಮನವಿ ಮಾಡಲಾಗಿದೆ. ಮುಂಬರುವ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ ಅನುದಾನ ತಂದು ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಬರಗಾಲ ಪಟ್ಟಿಗೆ ತಾಲೂಕು ಸೇರ್ಪಡೆಗೊಂಡಿದ್ದು ಸರ್ಕಾರದ ಮಾರ್ಗ ಸೂಚಿಯಂತೆ ರೈತರಿಗೆ ಪರಿಹಾರ ಸಿಗಲಿದೆ. ಹುಲಿಕೆರೆ ಗ್ರಾಮದಿಂದ ಬಾಣನಕೆರೆವರೆಗಿನ ಲಿಂಕ್ ರಸ್ತೆಗೆ ಅನುದಾನದ ಕೊರತೆಯಿದ್ದು ಮುಂಬರುವ ದಿನಗಳಲ್ಲಿ ಹೆಚ್ಚು ಅನುದಾನ ನೀಡಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ ಎಂದರು. ಕೃಷಿ ಪತ್ತಿನ ನಿರ್ದೇಶಕ ಎಚ್‌ಪಿ ಸಂಪತ್ ಕುಮಾರ್ ಮಾತನಾಡಿ, ಶಾಸಕರ ಸಹಕಾರದಿಂದ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಗ್ರಾಮದಲ್ಲಿ ಎಂಎಂಎಲ್ ವಶಪಡಿಸಿಕೊಂಡಿದ್ದ ರೈತರ ಜಮೀನನ್ನು ಪುನಃ ರೈತರಿಗೆ ಕೊಡಿಸುವ ಕೆಲಸವನ್ನು ಮಾಡಿದ್ದಾರೆ. ತೋಟಿ ಏತ ನೀರಾವರಿ ಯೋಜನೆ ಮೂಲಕ ಗ್ರಾಮದ ಕೆರೆಯನ್ನು ತುಂಬಿಸಲು ಪೈಪ್‌ಲೈನ್ ಮಾಡಿಸಿದ್ದಾರೆ. ಗ್ರಾಮದ ಅನೇಕ ಅಭಿವೃದ್ಧಿ ಕೆಲಸಗಳಿಗೆ ಶಾಸಕರು ಹೆಚ್ಚು ಅನುದಾನ ನೀಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮದ ಮಾಜಿ ಜನಪ್ರತಿನಿಧಿಗಳು, ಡೇರಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರನ್ನು ಸನ್ಮಾನಿಸಲಾಯಿತು. ಗಣೇಶೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಿಗೆ ಜೆಸಿಬಿ ಯಂತ್ರದ ಮೂಲಕ ಪುಷ್ಪಾರ್ಚನೆ ಮಾಡುವ ಮೂಲಕ ಶುಭ ಕೋರಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಗೌರಿ ಗಣೇಶ ಮೂರ್ತಿಯ ಉತ್ಸವ ನಡೆಯಿತು. ಕ್ಲಾಸಿಕ್ ಡೋಲ್ ಮತ್ತು ಆರ್ಕೆಸ್ಟ್ರಾವನ್ನು ಏರ್ಪಡಿಸಲಾಯಿತು. ಭಾನುವಾರ ಮಧ್ಯಾಹ್ನ ಗ್ರಾಮದ ಕೆರೆಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ವಿನಾಯಕ ಗೆಳೆಯರ ಬಳಗ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಆಶಾದೇವಿ ಪ್ರಕಾಶ್, ಹೊನ್ನಮ್ಮ ಧಣಿ ಕುಮಾರ್, ಹಿರಿಯಣ್ಣ ಗೌಡ, ಅನಿತಾ ಮಹೇಶ್, ಮುಖಂಡರುಗಳಾದ ಪುಟ್ಟಸ್ವಾಮಿ, ತೋಟಿ ನಾಗರಾಜ್, ಚಂದ್ರೇಗೌಡ, ತೋಪೇಗೌಡ, ವಳಗೇರಹಳ್ಳಿ ಮಂಜಣ್ಣ, ಪಟೇಲ್ ಕುಮಾರ್, ಜಂಬೂರು ಮಹೇಶ್, ದೇವರಾಜ್, ರೇಣುಕಾ ರಂಗಸ್ವಾಮಿ, ಭಾಗ್ಯಮ ವೆಂಕಟೇಶ್, ರಂಗೇಗೌಡ, ನಾಗೇಶ್, ಹೊನ್ನೇಗೌಡ, ಸೋಮೇಗೌಡ, ನಾಗಮಣಿ ಪ್ರಕಾಶ್, ರಾಜೇಶ್, ಮತ್ತು ವಿನಾಯಕ ಗೆಳೆಯರ ಬಳಗದ ಸರ್ವ ಸದಸ್ಯರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.