ಎಕರೆಗೆ ₹50 ಸಾವಿರ ಪರಿಹಾರ ನೀಡಲು ಶಾಸಕ ಬೆಲ್ಲದ್‌ ಆಗ್ರಹ

KannadaprabhaNewsNetwork | Updated : Nov 10 2023, 01:04 AM IST

ಸಾರಾಂಶ

ಸಚಿವ ಭೋಸರಾಜು ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲ ರಾಜ್ಯ ಸರ್ಕಾರ ಬರದ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ

ಕನ್ನಡಪ್ರಭ ವಾರ್ತೆ ಮಾನ್ವಿ

ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಇಂತಹ ಬರಗಾಲ ಹಿಂದೆ ಎಂದೂ ಬಂದಿರಲಿಲ್ಲ. ರೈತರು ಸಂಪೂರ್ಣ ಬೆಳೆನಷ್ಟ ಅನುಭವಿಸಿ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಪ್ರತಿ ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕು ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಬಿಜೆಪಿಯಿಂದ ಹಮ್ಮಿಕೊಂಡಿರುವ ಬರ ಅಧ್ಯಯನ ಪ್ರವಾಸ ಅಂಗವಾಗಿ ಗುರುವಾರ ತಾಲೂಕಿನ ಪೋತ್ನಾಳ ಗ್ರಾಮಕ್ಕೆ ಆಗಮಿಸಿದ ಅವರು, ರೈತರ ಹೊಲಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಅಧ್ಯಯನ ನಡೆಸಿ ಮಾತನಾಡಿದರು.ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಆಗಿದೆ. ಬಿಜೆಪಿ ಮುಖಂಡರು ಬರ ಅಧ್ಯಯನ ಆರಂಭಿಸಿದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು 320 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.

ಜಿಲ್ಲೆಯ ಎನ್.ಎಸ್. ಬೋಸರಾಜು ಅದೃಷ್ಟದ ಫಲದಿಂದಾಗಿ ಸಚಿವರಾಗಿದ್ದರೂ ಕೂಡಾ ಈ ಭಾಗದ ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಬೋಸರಾಜು ತಮ್ಮ ವೈಯಕ್ತಿಕ ಫೈಲ್‌ಗಳನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ ವಿನಾ ರೈತರ ನೆರವಿಗೆ ಧಾವಿಸುವಲ್ಲಿ ಹಾಗೂ ಬರ ಅಧ್ಯಯನ ಮಾಡುವಲ್ಲಿ ಎಡವಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಇತರೆ ರಾಜ್ಯಗಳಿಗೆ ವಿದ್ಯುತ್ ನೀಡುವ ನಾವು ಇಲ್ಲಿನ ರೈತರಿಗೆ, ಕೈಗಾರಿಕೆಗೆ, ಗೃಹಪಯೋಗಕ್ಕೆ ವಿದ್ಯುತ್ ಇಲ್ಲದಿರುವುದು ದುರಂತವೇ ಸರಿ ಎಂದರು. ಈ ವೇಳೆ ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಸೇರಿ ಇತರರು ಇದ್ದರು.

Share this article