ಕನ್ನಡಪ್ರಭ ವಾರ್ತೆ ಸಿದ್ದಾಪುರ
ಭಾರಿ ಮಳೆ-ಗಾಳಿಯಿಂದ ಹಾನಿಗೊಳಗಾದ ತಾಲೂಕಿನ ವಿವಿಧ ಸ್ಥಳಗಳಿಗೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರಕಾರದ ಪರಿಹಾರದ ಚೆಕ್ ಜೊತೆಗೆ ವೈಯುಕ್ತಿಕ ಸಹಾಯ ನೀಡಿದರು.ಮಳೆಯಿಂದ ಸಂಪೂರ್ಣ ಹಾನಿಗೊಳಗಾದ ಪಟ್ಟಣದ ರವೀಂದ್ರ ನಗರದ ಸರೋಜ ಮಾಣಿಕ್ಯ ಸ್ವಾಮಿ ಅವರ ಕುಸಿದ ಮನೆಯನ್ನು ಪರಿಶೀಲಿಸಿ ಸರಕಾರದ ಚೆಕ್ ಮತ್ತು ವೈಯುಕ್ತಿಕ ಸಹಾಯ ನೀಡಿ ವಸತಿ ಯೋಜನೆಯಡಿ ಆದ್ಯತೆಯ ಮೇರೆಗೆ ಮನೆ ಮಂಜೂರಿ ಮಾಡಲು ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು.ಕಲ್ಯಾಣಪುರದಲ್ಲಿ ನೆರೆಹಾವಳಿ ಕಾರಣ ಐದು ಕುಟುಂಬಗಳಿಗೆ ಅಕ್ಕುಂಜಿ ಶಾಲೆಯಲ್ಲಿ ವ್ಯವಸ್ಥೆ ಮಾಡಿದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಫಲಾನುಭವಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ತಹಸೀಲ್ದಾರರಿಗೆ ಸೂಚಿಸಿದರು.
ನಿಪ್ಲಿ ಜಲಾಶಯದ ಜಲಪಾತ ವೀಕ್ಷಿಸಿ ಪ್ರವಾಸಿಗರು ನೀರಿಗಿಳಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಹಲಗೇರಿ ಪಿಡಿಒಗೆ ಸೂಚಿಸಿದರು. ಇಟಗಿ ಗ್ರಾಪಂ ಹರ್ಕನಳ್ಳಿಯ ಮಹಾಬಲೇಶ್ವರ ನಾಯ್ಕ ಅವರ ಮನೆ ಬಳಿ ಧರೆ ಕುಸಿದಿದ್ದನ್ನು ವೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ಗುಲ್ಲುಮನೆಯಲ್ಲಿ ಕೊಟ್ಟಿಗೆಯ ಮೇಲೆ ಮರ ಬಿದ್ದು ಎರಡು ಜಾನುವಾರು ಮೃತಪಟ್ಟ ಕುಟುಂಬದ ಶಿವಾನಂದ ನಾಯ್ಕರ ಮನೆಗೆ ಭೇಟಿ ನೀಡಿ ಸರಕಾರದ ಚೆಕ್ ಜೊತೆಗೆ ವೈಯುಕ್ತಿಕ ಸಹಾಯ ನೀಡಿದರು.
ಹಾನಿಗೊಳಗಾದ ಇಟಗಿ ಕಾಂತಿವನದ ಕೆರೆದೇವಿ ಹಸ್ಲರ್ ಹಾಗೂ ಕೊಡ್ತಗಣಿಯ ಕೃಷ್ಣ ಹಸ್ಲರ್ ಅವರ ಮನೆ, ಐಸೂರಿನ ದ್ಯಾವರಿ ತಿಮ್ಮ ನಾಯ್ಕ ಅವರ ಮನೆ, ಕೆರೆಕುಳಿಯ ಮಂಜುನಾಥ ಗೌಡ ಅವರ ಮನೆ ಹಾನಿ ವೀಕ್ಷಿಸಿ ಸರಕಾರದ ಚೆಕ್, ವೈಯುಕ್ತಿಕ ಸಹಾಯ ನೀಡಿದರು. ಹಸ್ವಿಗುಳಿಯ ವೆಂಕಟರಮಣ ನಾಯ್ಕ ಅವರ ಮನೆ ಬಳಿ ಧರೆ ಕುಸಿತ ವೀಕ್ಷಿಸಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.ಹಾರ್ಸಿಕಟ್ಟಾ ಸಮೀಪದ ಭಂಡಾರಕೇರಿ-ಮಲ್ಕಾರ ಘಟ್ಟದ ಧರೆ ಕುಸಿತ, ಹೆಗ್ಗರಣಿ ಬಸ್ ತಂಗುದಾಣದ ಬಳಿ ಧರೆ ಕುಸಿತ, ಹೆರೂರಿನ ಅಬ್ದುಲ್ ಅವರ ಮನೆ ಬಳಿ ಧರೆ ಕುಸಿತ ವೀಕ್ಷಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ, ಸಿಪಿಐ ಕುಮಾರ ಮುಂತಾದ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಇದ್ದರು.