ಸಿದ್ದಾಪುರ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದು ನೂರು ವರ್ಷ ಪೂರೈಸಿದ ಹಿನ್ನೆಲೆ ಆಯೋಜಿಸಿರುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ತಾಲೂಕಿನ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಶಾಸಕ ಭೀಮಣ್ಣ ನಾಯ್ಕ ಮನವಿ ಮಾಡಿದರು.ಪಟ್ಟಣದ ಹೊಸೂರಿನ ಬಂಕೇಶ್ವರ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನ ನೂರು ವರ್ಷಗಳ ಹಿಂದೆ ಜರುಗಿತ್ತು. ಆ ಐತಿಹಾಸಿಕ ಅಧಿವೇಶನದ ಶತಮಾನೋತ್ಸವದ ಪ್ರಯುಕ್ತ ಗಾಂಧೀಜಿ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆದ ಸ್ಥಳದಲ್ಲೇ ಡಿ. ೨೭ರಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದರು.
ಕಾರವಾರ: ತಾಲೂಕಿನ ಗೋಟೆಗಾಳಿ ಗ್ರಾಪಂ ವ್ಯಾಪ್ತಿಯ ಬಾಳ್ನಿ(ಪ. ಜಾತಿ) ಮತ್ತು ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ(ಸಾಮಾನ್ಯ) ಖಾಲಿ ಇರುವ ಗ್ರಾಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ತಾತ್ಕಾಲಿಕವಾಗಿ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ನಮೂನೆಯನ್ನು ಆಯಾ ಗ್ರಾಪಂ ಕಾರ್ಯಾಲಯದಲ್ಲಿ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜ. 20 ಕೊನೆಯ ದಿನವಾಗಿದೆ. ಅಭ್ಯರ್ಥಿಯು ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್‌ನಲ್ಲಿ ಪ್ರಮಾಣಪತ್ರ ಪಡೆದಿರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಪಂ ಕಚೇರಿಯನ್ನು ಸಂಪರ್ಕಿಸುವಂತೆ ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಹಾಗೂ ಸದಸ್ಯ ಕಾರ್ಯದರ್ಶಿ ಗ್ರಾಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಮೇಲ್ವಿಚಾರಕರ ನೇಮಕಾತಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.