ತುಂಗಾ ನದಿ ಪ್ರವಾಹ ತಡೆಗೋಡೆಗಾಗಿ ಅನುದಾನ ಕೋರಿ ಡಿಸಿಎಂಗೆ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಪತ್ರ

KannadaprabhaNewsNetwork | Published : Jul 19, 2024 12:49 AM
Follow Us

ಸಾರಾಂಶ

ತುಂಗಾ ನದಿ ಪ್ರವಾಹ ತಡೆಗೋಡೆಗಾಗಿ ಅನುದಾನ ನೀಡಬೇಕು ಎಂದು ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್‌ ಅವರಿಗೆ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರವಾಹದ ಸಂದರ್ಭದಲ್ಲಿ ತುಂಗಾ ನದಿ ಉಕ್ಕಿ ಹರಿದು ನಾಗರೀಕ ಪ್ರದೇಶಗಳಿಗೆ ನುಗ್ಗುವುದನ್ನು ತಡೆಯುವ ಸಂಬಂಧ ತುಂಗಾ ನದಿಯ ಉದ್ದಕ್ಕೂ ಬಲದಂಡೆ ನಿರ್ಮಾಣ ಸೇರಿದಂತೆ ಪ್ರವಾಹ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳಿಗೆ ಕರ್ನಾಟಕ ನೀರಾವರಿ ನಿಗಮದಿಂದ ಅನುದಾನ ನೀಡಬೇಕು ಎಂದು ಉಪ ಮುಖ್ಯಮಂತ್ರಿಗಳೂ ಆದ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್‌ ಅವರಿಗೆ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಅವರು ಮನವಿ ಸಲ್ಲಿಸಿದರು.

ಗುರುವಾರ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು. ಶಿವಮೊಗ್ಗ ನಗರದ ಮದರಿಪಾಳ್ಯದ ಶ್ರೀ ಕಲ್ಲೇಶ್ವರ ದೇವಸ್ಥಾನದ ಪಕ್ಕ ಹಾದು ಹೋಗುವ ತುಂಗಾ ನದಿಯ ಪ್ರವಾಹದಿಂದ ನಾಗರೀಕರ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯಾಗುತ್ತಿದೆ. ಇದರ ರಕ್ಷಣೆಗಾಗಿ ತುಂಗಾ ನದಿಯ ಬಲದಂಡೆಗೆ ಸುಮಾರು 100 ಮೀಟರ್ ಉದ್ದಕ್ಕೆ ರಕ್ಷಣಾ ಗೋಡೆಯನ್ನು ನಿರ್ಮಾಣ ಮಾಡಲು ಕರ್ನಾಟಕ ನೀರಾವರಿ ನಿಗಮ ನಿಯಮಿತ ಶಿವಮೊಗ್ಗ ಇವರಿಗೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯ ನೀರು ಕೆರೆ ಕಟ್ಟೆ ತುಂಬಿ ಭದ್ರಾ ಎಡದಂಡೆ ಕಾಲುವೆ ಮುಖಾಂತರ ಹರಿದು ಶಿವಮೊಗ್ಗ ನಗರದ ಅನೇಕ ಬಡಾವಣೆ ಗಳಲ್ಲಿ ನೀರು ನುಗ್ಗಿ ಪ್ರವಾಹ ಉಂಟಾಗಿ ಅನೇಕ ಆಸ್ತಿಪಾಸ್ತಿ ಮನೆಗಳಿಗೆ ಹಾನಿಯಾಗುತ್ತಿದೆ. ಮಳೆಗಾಲದಲ್ಲಿ ಈ ಹೆಚ್ಚುವರಿ ನೀರನ್ನು ಹೊರಗೆ ಹರಿದು ಬಿಡಲು ಬೀಡುಗುಂಡಿಗಳನ್ನು ನಿರ್ಮಾಣಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತುಂಗಾ ಮೇಲ್ದಂಡೆ ಯೋಜನೆಯಲ್ಲಿ ನಿಗಮದ ಜಾಗವನ್ನು ಒತ್ತುವರಿ ಮಾಡುವುದಲ್ಲದೆ ಜಾಗವನ್ನು ಕಬಳಿಸಲು ಪ್ರಯತ್ನಿಸುತ್ತಿರುವುದರಿಂದ ಸದರಿ ಕಾಲುವೆಯ ಎರಡು ಬದಿಗಳಲ್ಲಿ ಚೈನೇಜ್ 10,000 ಕಿಲೋಮೀಟರ್ ರಿಂದ ಚೈನೇಜ್ 21,000 ಕಿಲೋಮೀಟರ್‌ವರೆಗೆ ( ಒಟ್ಟು 22 ಕಿಲೋ ಮೀಟರ್) ಬಾರ್ಬಡ್‌ ಜಿಐ ಫೆನ್ಸಿಂಗ್ ಮತ್ತು ಚೈನ್‌ಲಿಂಕ್ ಫೆನ್ಸಿಂಗ್ ಕಾಮಗಾರಿಗಾಗಿ ಅನುದಾನ ಬಿಡುಗಡೆ ಮಾಡಲು ಮನವಿಯಲ್ಲಿ ಒತ್ತಾಯಿಸಲಾಯಿತು.