ಕನ್ನಡಪ್ರಭ ವಾರ್ತೆ ಬಾದಾಮಿ
ತಾ.ಪಂ ಸಭಾಭವನದಲ್ಲಿ ಸೋಮವಾರ ಜರುಗಿದ ಕೆಡಿಪಿ ತ್ರೈ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸಭೆಗೆ ಗೈರಾಗಿರುವ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಅವರಿಂದ ಸಮಂಜಸ ಉತ್ತರ ಪಡೆಯಿರಿ ಎಂದು ತಾ.ಪಂ ಇಒಗೆ ಸೂಚಿಸಿದರು.
ಸಮವಸ್ತ್ರ ಶೀಘ್ರ ವಿತರಣೆ: ಈಗಾಗಲೇ ತಾಲೂಕಿನ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕಗಳ ವಿತರಣೆ ಆಗಿದ್ದು, ಮಾರಾಟ ಪುಸ್ತಕಗಳಲ್ಲಿ ಶೇ.20ರಷ್ಟು ಮಾತ್ರ ವಿತರಿಸಲಾಗಿದೆ. ಶೂ ಮತ್ತು ಸಮವಸ್ತ್ರಗಳು 2-3 ದಿನಗಳಲ್ಲಿ ಬರಲಿದ್ದು, ಶೀಘ್ರ ವಿತರಿಸಲಾಗುವುದು ಎಂದು ಬಿಇಒ ಕೇಶವ ಪೆಟ್ಲೂರ ಹೇಳಿದರು.ತಾಲೂಕಿನಲ್ಲಿರುವ ಬರುವ ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ ಮತ್ತು ಕಾಂಪೌಂಡ್ ಒದಗಿಸಬೇಕು. ಈ ಮೂಲಸೌಕರ್ಯ ಒದಗಿಸುವಲ್ಲಿ ಪಿಡಿಒ, ಶಿಕ್ಷಣ ಇಲಾಖೆ ಜಂಟಿಯಾಗಿ ಸಹಕಾರದಿಂದ ಕೆಲಸ ಮಾಡಬೇಕು. ಜತೆಗೆ ಕಾಲಮಿತಿಯಲ್ಲಿ ಅವಧಿಗೆ ಕೊನೆಗೆ ನರೇಗಾ ಯೋಜನೆಯಲ್ಲಿ ಅನುದಾನ ಒದಗಿಸಿ ಅನುಷ್ಠಾನಗೊಳಿಸಬೇಕೆಂದು ಶಾಸಕ ಚಿಮ್ಮನಕಟ್ಟಿ ಸಲಹೆ ನೀಡಿದರು. ತಾಲೂಕಿನಲ್ಲಿ ಜೆ.ಜೆ.ಎಂ. ಯೋಜನೆಯಡಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ಸಭೆಯಲ್ಲಿ ಸದಸ್ಯರು ದೂರಿದಾಗ ಈ ಬಗ್ಗೆ ಅಧಿಕಾರಿ ನವೀನ್ ಹುಚರೆಡ್ಡಿ ನೀಡಿದ ಮಾಹಿತಿ ಬಗ್ಗೆ ಶಾಸಕರು ಸುದೀರ್ಘ ಚರ್ಚೆ ನಡೆಸಿದರು.
ಕೃಷಿ ಇಲಾಖೆ ವರದಿ: ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ರೈತರು ಜಮೀನುಗಳನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಬೀಜ ಮತ್ತು ಗೊಬ್ಬರದ ಸಂಗ್ರಹವಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ ಹೇಳಿದರು.
32 ಕೃಷಿ ಹೊಂಡಗಳು ಬಂದಿದ್ದು, ಅರ್ಹರಿಗೆ ತಲಾ ಎರಡು ಲಕ್ಷ ರೂ.ವರೆಗೆ ರಿಯಾಯಿತಿ ದೊರಕಲಿದ್ದು, ಇದಕ್ಕೆ ಬೇಕಾದ ಪರಿಕರಗಳನ್ನು ಇಲಾಖೆಯಿಂದ ಕೊಡಲಾಗುವುದು. 259 ಹೆಕ್ಟೇರ್ ಜಮೀನಿನಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಸರ್ಕಾರಕ್ಕೆ ವರದಿ ಮಾಡಲಾಗಿದೆ ಎಂದು ಅಧಿಕಾರಿ ಬಾಲನಗೌಡ ಪಾಟೀಲ ಹೇಳಿದರು.
ಇನ್ನು ಮಾಸಾಶನಕ್ಕೆ ಜನರನ್ನು ಅಲೆದಾಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ನಿರ್ಲಕ್ಷ್ಯ ಸಹಿಸಲಾಗದು. ಕೂಡಲೇ ಎಲ್ಲ ಮಾಸಾಶನಗಳನ್ನು ಫಲಾನುಭವಿಗಳ ಹೆಸರಿಗೆ ಮಂಜೂರಿ ಮಾಡಿ ಎಂದು ಚಿಮ್ಮನಕಟ್ಟಿ ಹೇಳಿದರು.
ಸಭೆಯಲ್ಲಿ ಹಾಲು ಒಕ್ಕೂಟದ ನಿರ್ದೇಶಕ ಈರನಗೌಡ ಕೆರಿಗೌಡರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ.ಬುದಿಹಾಳ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು, ಪಿಡಿಒ ಇತರರು ಭಾಗವಹಿಸಿದ್ದರು.