ಪ್ರಭಾವಿಗಳಿಂದ ಒತ್ತುವರಿಯಾಗಿದ್ದ ಜಮೀನು ತೆರವುಗೊಳಿಸಿದ ಶಾಸಕ ದರ್ಶನ್

KannadaprabhaNewsNetwork | Published : Aug 31, 2024 1:41 AM

ಸಾರಾಂಶ

ಕಳೆದ ಮೂರು ದಶಕಗಳಿಂದ ಬಗೆಹರಿಯದ ನಿವೇಶಗಳಿಗೆ ಮೀಸಲಾಗಿದ್ದ ಜಮೀನು ಒತ್ತುವರಿ ಸಮಸ್ಯೆ ಬಗ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗಮನ ಹರಿಸಿ ತಕ್ಷಣ ಕ್ರಮ ಕೈಗೊಂಡು ಅಧಿಕಾರಿಗಳ ಮೂಲಕ ಜಮೀನು ಒತ್ತುವರಿಯನ್ನು ತೆರವುಗೊಳಿಸಿದ್ದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಆಶ್ರಯ ಮನೆ ಹಾಗೂ ಅಂಬೇಡ್ಕರ್ ವಸತಿ ನಿರ್ಮಾಣಕ್ಕಾಗಿ ಮೀಸಲಾಗಿದ್ದ ಜಮೀನು ಒತ್ತುವರಿಯನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳದಲ್ಲೇ ಇದ್ದು ಜೆಸಿಬಿ ಮೂಲಕ ಶುಕ್ರವಾರ ತೆರವುಗೊಳಿಸಿದರು.

ತಾಲೂಕಿನ ಬನ್ನಂಗಾಡಿ ಗ್ರಾಮದ ಸರ್ವೇ ನಂಬರ್ 155ರಲ್ಲಿ ಆಶ್ರಯ ಮನೆ ಹಾಗೂ ಅಂಬೇಡ್ಕರ್ ವಸತಿಗಾಗಿ ಸುಮಾರು 25 ಎಕರೆ ಜಮೀನಿನನ್ನು 1995 ರಲ್ಲಿ ಮೀಸಲುಗೊಳಿಸಲಾಗಿತ್ತು.

ಈ ಜಮೀನಿನಲ್ಲಿ ಮೂಲ ಸೌಕರ್ಯಗಳೊಂದಿಗೆ 253 ಮನೆಗಳನ್ನು ನಿರ್ಮಿಸಲು ನಕ್ಷೆ ರೂಪಿಸಲಾಗಿತ್ತು. ಆದರೆ, ಈ ಜಮೀನನ್ನು ಪ್ರಭಾವಿಗಳು ಅತಿಕ್ರಮಿಸಿ ಒತ್ತುವರಿ ಮಾಡಿಕೊಂಡಿದ್ದರು. ತೆರವುಗೊಳಿಸಲು ಕಳೆದ ಮೂರು ದಶಕಗಳಿಂದ ಕಗ್ಗಂಟ್ಟಾಗಿತ್ತು.

ಬನ್ನಂಗಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆಗಳು ನಿಮ್ಮ ಮನೆ ಬಾಗಿಲಿಗೆ ಎಂಬ ವಿನೂತನ ಕಾರ್ಯಕ್ರಮದ ವೇಳೆ ಈ ವಿಚಾರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಶಾಸಕರು, ಕಂದಾಯ ಮತ್ತು ಸರ್ವೇ ಇಲಾಖೆಗಳ ಅಧಿಕಾರಿಗಳು ಮೂಲಕ ಜಮೀನು ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ. ಆಶ್ರಯ ನಿವೇಶನಕ್ಕಾಗಿ 1995ರಲ್ಲಿ ಜಮೀನು ಮೀಸಲಾಗಿತ್ತು. ಈ ಹಿಂದೆ ನಿವೇಶನಕ್ಕೆ ಸಂಬಂಧಿಸಿದಂತೆ ಕೆಲವರಿಗೆ ಹಕ್ಕು ಪತ್ರಗಳನ್ನು ಕೂಡ ವಿತರಿಸಲಾಗಿದೆ. ಆದರೆ, ಜಮೀನು ಒತ್ತುವರಿ ಮತ್ತು ಕೆಲವು ಸಮಸ್ಯೆಗಳಿಂದ ಯಾರೂ ಅನುಭವಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದರು.

ಸರ್ವೇ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ಗಡಿ ಗುರುತಿಸಿದ ಬಳಿಕ ಸಂಪೂರ್ಣ ಒತ್ತುವರಿ ತೆರವುಗೊಳಿಸಿ, ಜಮೀನು ಸುತ್ತಲೂ ಕಂದಕ ನಿರ್ಮಿಸಲಾಗುವುದು. ಯಾವುದೇ ಕಾರಣಕ್ಕೂ ಬಡವರಿಗೆ ಮೀಸಲಾಗಿರುವ ಜಮೀನನ್ನು ಅನ್ಯರ ಪಾಲಾಗಲು ಬಿಡುವುದಿಲ್ಲ ಎಂದು ಹೇಳಿದರು.

ವಸತಿ ಯೋಜನೆಗಾಗಿ ತಯಾರಿಸಲಾದ ನಕ್ಷೆ ಪ್ರಕಾರ ಈಗ ಬಡಾವಣೆ ನಿರ್ಮಿಸಲು ಸಾಧ್ಯವಿಲ್ಲ. ಹಿಂದಿನ ನಕ್ಷೆಯಲ್ಲಿ ಕೆಲ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗಿಲ್ಲ. ನಾವು ಎಲ್ಲವನ್ನೂ ಪರಿಗಣಿಸಿ ಹೊಸ ನಕ್ಷೆ ರೂಪಿಸಿ ಬಡವರಿಗೆ ಮತ್ತು ಅರ್ಹ ಫಲಾನುಭವಿಗಳಿಗೆ ನಿವೇಶನ ವಿತರಿಸುವ ಕೆಲಸ ಮಾಡುತ್ತೇವೆ ಎಂದರು.

ಈ ಹಿಂದೆ ಹಕ್ಕು ಪತ್ರ ವಿತರಣೆ ವೇಳೆ ಒಂದೇ ನಿವೇಶನವನ್ನು ಇಬ್ಬರು, ಮೂವರಿಗೆ ಕೊಟ್ಟಿರುವ ದಾಖಲೆ ಸಿಕ್ಕಿದೆ. ನಿಜವಾದ ಫಲಾನುಭವಿ ಯಾರು? ಆನಂತರದಲ್ಲಿ ಒಂದೇ ನಿವೇಶನಕ್ಕೆ ಇತರರು ಯಾವ ರೀತಿ ಹಕ್ಕು ಪತ್ರ ಪಡೆದುಕೊಂಡಿದ್ದಾರೆ ಎಂಬುದನ್ನು ಗ್ರಾಪಂ ಅಧಿಕಾರಿಗಳ ಮೂಲಕ ಗುರುತಿಸಿ ನಿವೇಶನ ವಿತರಿಸಲಾಗುವುದು. ಜತೆಗೆ ಗ್ರಾಮದ ಪಕ್ಕದಲ್ಲೇ ಹರಿಯುವ ಹೇಮವತಿ ನಾಲೆಯ ಹೂಳು ತೆಗೆಸಲಾಗುವುದು ಎಂದು ತಿಳಿಸಿದರು.

ಬನ್ನಂಗಾಡಿ ಗ್ರಾಮದಲ್ಲಿ ನಡೆಯುತ್ತಿರುವ ‘ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಕಾರ್ಯಕ್ರಮ’ ಅರ್ಥಪೂರ್ಣವಾಗಿದೆ. ತಾಲೂಕುಮಟ್ಟದ ಎಲ್ಲಾ ಅಧಿಕಾರಿಗಳು ಸ್ಥಳದಲ್ಲೇ ವಾಸ್ತವ್ಯ ಹೂಡಿ ಗ್ರಾಪಂ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಇ- ಸ್ವತ್ತಿಗಾಗಿ 130, ನಿವೇಶನಕ್ಕಾಗಿ 76, ವಸತಿಗಾಗಿ 33, ರಸ್ತೆಗೆ 3, ಕೊಟ್ಟಿಗೆ ನಿರ್ಮಾಣಕ್ಕಾಗಿ 18 ಅರ್ಜಿಗಳು ಸಲ್ಲಿಕೆಯಾಗಿದೆ. ಕಂದಾಯ ಇಲಾಖೆಗೆ ಮಾಶಾಸನ 57, ವಂಶವೃಕ್ಷ 29, ಮರಣ ಪ್ರಮಾಣ ಪತ್ರ 10, ಜಮೀನು ಖಾತೆ 77, ಜಾತಿ ಮತ್ತು ಆದಾಯ ದೃಢೀಕರಣಕ್ಕೆ 36 ಅರ್ಜಿಗಳು ಹಾಗೂ ತೋಟಗಾರಿಕೆಯ ವಿವಿಧ ಯೋಜನೆ ಪಡೆಯಲು 14, ವಿದ್ಯುತ್ ಕಂಬ ಅಳವಡಿಕೆಗೆ 11, ಭೂ ಮಾಪನ ಇಲಾಖೆಗೆ 6, ವಿಕಲ ಚೇತನರ ಇಲಾಖೆಯಿಂದ ಸಾಧನ ಸಲಕರಣೆ ಪಡೆಯಲು 10 ಅರ್ಜಿಗಳು ಸೇರಿ ಒಟ್ಟಾರೆ 514 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಿವರಿಸಿದರು.

ಗ್ರಾಮಸ್ಥರ ಮೆಚ್ಚುಗೆ:

ಕಳೆದ ಮೂರು ದಶಕಗಳಿಂದ ಬಗೆಹರಿಯದ ನಿವೇಶಗಳಿಗೆ ಮೀಸಲಾಗಿದ್ದ ಜಮೀನು ಒತ್ತುವರಿ ಸಮಸ್ಯೆ ಬಗ್ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗಮನ ಹರಿಸಿ ತಕ್ಷಣ ಕ್ರಮ ಕೈಗೊಂಡು ಅಧಿಕಾರಿಗಳ ಮೂಲಕ ಜಮೀನು ಒತ್ತುವರಿಯನ್ನು ತೆರವುಗೊಳಿಸಿದ್ದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷ ಪ್ರಕಾಶ್, ಸದಸ್ಯ ರವಿ, ವಕೀಲ ಸುರೇಶ್ ಇತರರು ಇದ್ದರು.

Share this article