ಕನ್ನಡಪ್ರಭ ವಾರ್ತೆ ಪಾಂಡವಪುರ
ಐತಿಹಾಸಿಕ ಪಟ್ಟಣದ ಹಿರೋಡೆ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶನಿವಾರ ಕೆರೆಗೆ ಬಾಗೀನ ಅರ್ಪಿಸಿದರು.ಬಳಿಕ ಮಾತನಾಡಿದ ಅವರು, ಪಟ್ಟಣಕ್ಕೆ ಹೊಂದಿಕೊಂಡಿರುವ ಹಿರೋಡೆ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕೆರೆಗೆ ಬಾಗೀನ ಅರ್ಪಿಸಲಾಗಿದೆ. ಕೆರೆಯು 188.18 ಎಂಸಿಎಫ್‌ಟಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪಟ್ಟಣ, ಕಾಚೇನಹಳ್ಳಿ, ದೇವೇಗೌಡನಕೊಪ್ಪಲು, ಚಿಕ್ಕಾಡೆ ಗ್ರಾಮದ ಭಾಗದ ವ್ಯಾಪ್ತಿಗೆ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತಿದೆ ಎಂದರು.
ಹಿರೋಡೆ ಕೆರೆಯಲ್ಲಿ ತುಂಬಿರುವ ಹೂಳು ತೆಗೆಸಿ ಅಭಿವೃದ್ಧಿಪಡಿಸಿ ಜತೆಗೆ ಕೆರೆಗೆ ಪಟ್ಟಣದ ಕೊಳಚೆ ನೀರು, ಬಸ್ ಡಿಫೋನಿಂದ ಬರುವ ಆಯಲ್‌ನ ಕೊಳಚೆ ನೀರು ಸಂಗ್ರಹವಾಗಿ ಕೆರೆ ಸಂಪೂರ್ಣವಾಗಿ ಕಲುಷಿತಗೊಳ್ಳುತ್ತಿದೆ. ಹಾಗಾಗಿ ಕೆರೆ ಅಭಿವೃದ್ಧಿಗೆ ಸಹಕರಿಸುವಂತೆ ಈ ಭಾಗದ ರೈತರು ಹಾಗೂ ನೀರು ಬಳಕೆದಾರರ ಸಂಘದವರು ಮನವಿ ಮಾಡಿದ್ದಾರೆ. ಅದರಂತೆ ಕೆರೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.ಪಟ್ಟಣದ ಯುಜಿಡಿ ಸಮಸ್ಯೆಯನ್ನು ಬಗೆಹರಿಸಿ ಕೊಳಚೆ ನೀರು ಕೆರೆಗೆ ಬಾರದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಕೆರೆಯಲ್ಲಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸುವ ಜತೆಗೆ ಕೆರೆ ಜಾಗವನ್ನು ಅರಣ್ಯ ಇಲಾಖೆಗೆ ಸುಮಾರು 150 ಎಕರೆ ಪ್ರದೇಶವನ್ನು ಮಂಜೂರು ಮಾಡಿಕೊಡಲಾಗಿದೆ. ಈ ಜಾಗವನ್ನು ಕೆರೆಗೆ ಮಂಜೂರು ಮಾಡಿಸಿಕೊಡಲಾಗುವುದು ಎಂದು ತಿಳಿಸಿದರು.ಕಾಡಾ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ರೈತರು ಬೆಳೆದ ಬೆಳೆಗಳನ್ನು ಸಾಗಿಲು ರಸ್ತೆಗಳ ಅಭಿವೃದ್ಧಿ ಹಾಗೂ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗಾಗಿ ಕಾಡಾ ದಿಂದ ಅನುದಾನ ನೀಡಲಾಗುತ್ತದೆ ಎಂದರು.
ನೀರು ಬಳಕೆದಾರರ ಸಂಘಗಳು ತೆರಿಗೆ ವಸೂಲಾತಿಯ ಜತೆಗೆ ಚಟುವಟಿಕೆಯಿಂದ ಕೂಡಿದ್ದರೆ ಅಂತಹ ಸಂಘಗಳಿಗೆ ಕಾಡಾದಿಂದ ಅನುದಾನವನ್ನು ನೀಡಲಾಗುತ್ತದೆ. ಆ ಅನುದಾನಗಳಿಂದ ನೀರು ಬಳಕೆದಾರರ ಸಂಘಗಳು ಕೆರೆಗಳ ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು.ಕೆರೆ ಅಭಿವೃದ್ಧಿಪಡಿಸುವುದು ಸರಕಾರ ಮಟ್ಟದಿಂದಲೇ ಆಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸರಕಾರದಿಂದ ಕಾಡಾಗೆ ಬರುವ ಅನುದಾನವು ಸಹ ಕಡಿಮೆಯಾಗಿದ್ದು, ಬಂದ ಅನುದಾನವನ್ನು ರೈತರ ಅಭಿವೃದ್ಧಿಗೆ ಬಳಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಚ್ಚುಕಟ್ಟು ಪ್ರದೇಶದ ರೈತರು ಶಾಸಕರಿಗೆ ಮನವಿ ಸಲ್ಲಿಸಿದರು. ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಉಪಾಧ್ಯಕ್ಷ ಎಲ್.ಅಶೋಕ್, ಸದಸ್ಯರಾದ ಪಾರ್ಥಸಾರಥಿ, ಜಯಲಕ್ಷ್ಮಮ್ಮ, ಉಮಾಶಂಕರ್, ನೀರಾವರಿ ನಿಗಮದ ಎಇಇ ಜಯರಾಮ್, ಎಇ ವನೋಜಿರಾವ್, ಗಣೇಶ್, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಲಿಂಗರಾಜು, ದೀಪು(ಲೋಹಿತ್), ನೀರು ಬಳಕೆದಾರರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಸೇರಿದಂತೆ ಎಲ್ಲಾ ನಿರ್ದೇಶಕರು, ರೈತರು, ಮುಖಂಡರು ಹಾಜರಿದ್ದರು.