ಹೊನ್ನಾವರ: ತಾಲೂಕಿನ ಬಸ್ ನಿಲ್ದಾಣಕ್ಕೆ ಶಾಸಕ ದಿನಕರ ಶೆಟ್ಟಿ ದಿಢೀರ್ ಭೇಟಿ ನೀಡಿದರು.ಬಸ್ ನಿಲ್ದಾಣ ಸ್ವಚ್ಛವಾಗಿಲ್ಲದರ ಬಗ್ಗೆ ಶಾಸಕರು ಗರಂ ಆದರು. ಇಡೀ ಬಸ್ ನಿಲ್ದಾಣವನ್ನು ಸುತ್ತಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸ್ವಚ್ಛತೆಯನ್ನು ಸರಿಯಾಗಿ ಮಾಡಿಸಿ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಕೇವಲ ಅಂಗಡಿಯವರ ಮೇಲೆ ತಮ್ಮ ಅಧಿಕಾರ ತೋರುವ ಬದಲು ಒಳ್ಳೆಯ ಬಸ್ ಗಳನ್ನು ಬಿಡುವ ಕೆಲಸ ಮಾಡಿ ಎಂದು ಹೇಳಿದರು.
ಹೊನ್ನಾವರ ಬಿಜೆಪಿ ಸರ್ಕಾರ ಇದ್ದಾಗ ನಿರ್ಮಿಸಲಾಗಿತ್ತು. ಬಸ್ ನಿಲ್ದಾಣ ಕಳಪೆ ಆಗಿಲ್ಲ. ಆದರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು.ಬಸ್ ನಿಲ್ದಾಣದ ಎದುರಿನ ಕಾಲುವೆ ಸಹ ಅವ್ಯವಸ್ಥಿತವಾಗಿದೆ. ಅದನ್ನು ಇನ್ನು ಒಂದು ತಿಂಗಳ ಒಳಗೆ ಸರಿ ಮಾಡುವ ಭರವಸೆ ನೀಡಿದರು. ಮಳೆಗಾಲ ಆರಂಭವಾಗುತ್ತಿದೆ. ಈಗ ನಾಲ್ಕು ದಿನದಿಂದ ಸುರಿದ ಮಳೆಗೆ ತಾಲೂಕಿನ ಹಲವೆಡೆ ಅನಾಹುತಗಳು ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಪರಿಹಾರಕ್ಕೆ ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ, ಸರ್ಕಾರ ಕಳೆದ ಮಳೆಗಾಲದ ಪರಿಹಾರವನ್ನೇ ನೀಡಲು ಆಗದೇ ಕೂತಿದೆ. ನಾಲ್ಕೈದು ಬಾರಿ ಕಂದಾಯ ಸಚಿವರನ್ನು ಕೇಳಿದಾಗ ಕೊಡುತ್ತೇವೆ ಎನ್ನುತ್ತಾರೆ. ಆದರೆ ಕೇಂದ್ರ ಸರ್ಕಾರ ಹಣವನ್ನು ನೀಡುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಬಸ್ ಡಿಪೋ ಬಗ್ಗೆ ಮಾತನಾಡುತ್ತಾ, ಉಸ್ತುವಾರಿ ಸಚಿವರು ಮಾಡಬೇಕು. ನಾನು ಕೆಲಸ ಮಾಡುವುದು, ಉಸ್ತುವಾರಿ ಸಚಿವರು ಅದರ ಶ್ರೇಯವನ್ನು ಪಡೆಯಬೇಕಾ ಎಂದು ಸಚಿವರ ವಿರುದ್ಧ ಹರಿಹಾಯ್ದರು.