ಲಕ್ಷ್ಮೇಶ್ವರ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಕಾರು ಚಾಲಕ ಸುನೀಲ ಜಯಪ್ಪ ಚವ್ಹಾಣ (26) ಲಕ್ಷ್ಮೇಶ್ವರ ಪಟ್ಟಣದ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಲಕ್ಷ್ಮೇಶ್ವರ ಪಟ್ಟಣದ ಹುಬ್ಬಳ್ಳಿ ರಸ್ತೆಯ ಮಲ್ಲಾಡದ ಕಾಲನಿಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ನಿವಾಸದಲ್ಲಿ ಈ ಘಟನೆ ನಡೆದಿದೆ. ದಿಂಡೂರ ಗ್ರಾಮದ ಶಾಸಕರ ಸಂಬಂಧಿಯೂ ಆಗಿದ್ದ ಸುನೀಲ ಕಳೆದ ಮೂರು ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಶಾಸಕ ಡಾ. ಚಂದ್ರು ಲಮಾಣಿ ಕೆಲಸದ ನಿಮಿತ್ತ ಗುರುವಾರ ಬೆಂಗಳೂರಿಗೆ ಹೋಗಿದ್ದರಿಂದ ಚಾಲಕ ಸುನೀಲ ರಾತ್ರಿ ಊಟ ಮಾಡಿ ಮನೆಯಲ್ಲಿ ಒಬ್ಬನೆ ಮಲಗಿದ್ದಾನೆ. ಶುಕ್ರವಾರ ಬೆಳಗ್ಗೆ ಹೊತ್ತಾದರೂ ಬಾಗಿಲು ತೆರೆದಿರಲಿಲ್ಲ ಮತ್ತು ಪೋನ್ ಕರೆ ಸ್ವೀಕರಿಸಲಿಲ್ಲವಾದ್ದರಿಂದ ಅನುಮಾನಗೊಂಡು ಮನೆಗೆ ಹೋಗಿ ನೋಡಿದಾಗ ನೇಣು ಹಾಕಿಕೊಂಡು ಮೃತಪಟ್ಟಿರುವುದು ಗೊತ್ತಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಪಿಐ ನಾಗರಾಜ ಮಾಡಳ್ಳಿ ಮತ್ತು ಪಿಎಸ್‌ಐ ನಾಗರಾಜ ಗಡದ ಪರಿಶೀಲನೆ ಬಳಿಕ ಮೃತದೇಹ ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.ವಿಷಯದ ತಿಳಿದು ಆಸ್ಪತ್ರೆಗೆ ಆಗಮಿಸಿದ ಮೃತನ ತಂದೆ-ತಾಯಿ ಹಾಗೂ ಸಂಬಂಧಿಕರು ಸುನೀಲ ಆತ್ಮಹತ್ಯೆ ಮಾಡಿಕೊಳ್ಳಲು ಮೇಲ್ನೋಟಕ್ಕೆ ಯಾವುದೇ ಬಲವಾದ ಕಾರಣಗಳಿಲ್ಲ. ತಂದೆ-ತಾಯಿ ಸಂಬಂಧಿಕರು ನಾವೆಲ್ಲ ಬರುವವರೆಗೂ ಕಾಯದೇ ಆಸ್ಪತ್ರೆಗೆ ಮೃತದೇಹ ಸ್ಥಳಾಂತರಿಸಿರುವುದು ನಮಗೆಲ್ಲ ನೋವುಂಟು ಮಾಡಿದೆ. ನಮಗೇನೂ ತಿಳಿಯದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಗಿಲು ಮುಟ್ಟಿದ ಆಕ್ರಂದನ:ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಸುನೀಲನ ತಾಯಿ ಗಿರಿಜವ್ವ ಹಾಗೂ ಆತನ ಸಂಬಂಧಿಕರು ಎದೆ ಬಡಿದುಕೊಂಡು ಅಳುತ್ತಿದ್ದ ದೃಶ್ಯ ಕಲ್ಲು ಕರಗುವಂತಿತ್ತು. ಎರಡು ಗಂಡು ಮಕ್ಕಳಲ್ಲಿ ಒಬ್ಬನನ್ನು ಕಳೆದುಕೊಂಡು ತಾಯಿಯ ಕರಳು ಸಂಕಟ ಪಡುತ್ತಿದ್ದ ದೃಶ್ಯ ಕರಳು ಚುರುಕ್ ಎನ್ನುವಂತೆ ಮಾಡಿತು.
ಶಾಸಕರು ಸಂಜೆ 7 ಗಂಟೆಯ ಸುಮಾರಿಗೆ ಬೆಂಗಳೂರಿನಿಂದ ಲಕ್ಷ್ಮೇಶ್ವರಕ್ಕೆ ಆಗಮಿಸಿದ ಬಳಿಕ ಮೃತದೇಹ ಅಂತ್ಯ ಸಂಸ್ಕಾರಕ್ಕೆ ದಿಂಡೂರ ತಾಂಡಾಕ್ಕೆ ಕಳುಹಿಸಲಾಯಿತು.ಈ ಕುರಿತು ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.
ಈ ವೇಳೆ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ನಮ್ಮ ಕಾರಿನ ಚಾಲಕ ಮೃತಪಟ್ಟಿರುವ ವಿಷಯ ತಿಳಿದು ನೋವಾಗಿದೆ. ನಾನು ಕಳೆದ 2 ದಿನಗಳಿಂದ ಊರಲ್ಲಿ ಇರಲಿಲ್ಲ, ಶುಕ್ರವಾರ ಬೆಳಗ್ಗೆ ಚಾಲಕ ಸುನೀಲ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಬಂದಿತು. ಸುನೀಲ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ, ತುಂಭಾ ಸೂಕ್ಷ್ಮ ಸ್ವಭಾವದ ಹುಡುಗನಾಗಿದ್ದನು ಅಲ್ಲದೆ ಆತನು ನಮ್ಮ ಹತ್ತಿರ ಸಂಬಂಧಿಯೂ (ಅಳಿಯ) ಕೂಡಾ ಆಗಿದ್ದ. ಯಾರೊಂದಿಗೆ ಜಗಳ ಮಾಡುವ ಸ್ವಭಾವದವನಲ್ಲ, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವಿಷಯ ತನಿಖೆಯಿಂದ ತಿಳಿದು ಬರಬೇಕಾಗಿದೆ ಎಂದರು.ಸುನೀಲನದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಆ ವರದಿಯಲ್ಲಿ ಯಾವ ಕಾರಣಕ್ಕೆ ಸಾವು ಸಂಭವಿಸಿದೆ ಎನ್ನುವ ಮಾಹಿತಿ ಸಿಗಲಿದೆ. ಆತನ ಮೋಬೈಲ್ ಪೊಲೀಸರಿಗೆ ಒಪ್ಪಿಸಲಾಗಿದೆ, ಅದರಲ್ಲಿನ ಮಾಹಿತಿ ಪೊಲೀಸರು ಕಲೆ ಹಾಕಿ ಘಟನೆಗೆ ಕಾರಣ ಕಂಡು ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.