ಕನ್ನಡಪ್ರಭ ವಾರ್ತೆ ಮೈಸೂರುಸಹಕಾರಿ ಬ್ಯಾಂಕ್ ಗಳನ್ನು ರಾಜ್ಯ ಸರ್ಕಾರ ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಹುಣಸೂರು ತಾಲೂಕಿನ ಸಹಕಾರ ಸಂಘಗಳಲ್ಲಿ ಸಾಲ ಮರುಪಾವತಿಸಿರುವ ಹಾಗೂ ಹೊಸ ರೈತ ಸದಸ್ಯರಿಗೆ ಸಾಲ ನೀಡದೆ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಶಾಸಕ ಜಿ.ಡಿ. ಹರೀಶ್ ಗೌಡ ನೇತೃತ್ವದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.ಅಶೋಕ ವೃತ್ತದ ಎಂಸಿಡಿಸಿಸಿ ಬ್ಯಾಂಕ್ ಎದುರು ಜಮಾಯಿಸಿದ ಸಂಘದ ಸದಸ್ಯರು, ರೈತರು ಆಡಳಿತ ಮಂಡಳಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಾಲ ಮರುಪಾವತಿಸಿ ಆರು ತಿಂಗಳಾದರೂ ಹೊಸ ಸಾಲ ನೀಡದೆ ಇರುವುದು ಮತ್ತು ಹೊಸ ಸಾಲ ಕೊಡಲು ಸಬೂಬು ಹೇಳುತ್ತಿರುವ ಅಧಿಕಾರಿಗಳ ವಿರುದ್ದ ಕಿಡಿಕಾರಿದರು. ಈ ವೇಳೆ ಬ್ಯಾಂಕ್ ಗೇಟಿನ ಬಳಿ ನಿಂತಿದ್ದ ರೈತರನ್ನು ಕರೆದು ಸಮಾಲೋಚಿಸಲು ಮುಂದಾಗದ ಅಧಿಕಾರಿಗಳ ವರ್ತನೆಗೆ ಆಕ್ರೋಶಗೊಂಡ ರೈತರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.ನಂತರ, ಸಮಾಧಾನಪಡಿಸಿದ ಶಾಸಕ ಜಿ.ಡಿ. ಹರೀಶ್ ಗೌಡರು ಆಡಳಿತಾಧಿಕಾರಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಕೂಡಲೇ ಸಾಲ ಬಿಡುಡೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.ಹುಣಸೂರು ತಾಲೂಕಿನ ಧರ್ಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 90 ಮಂದಿ ರೈತ ಸದಸ್ಯರಿಂದ 1.20 ಕೋಟಿ ರೂ. ವಸೂಲಾತಿ ಮಾಡಿ ಎಂಸಿಡಿಸಿಸಿ ಬ್ಯಾಂಕ್ ಗೆ ಪಾವತಿಸಿದ್ದು, ಇದುವರೆಗೂ ಬ್ಯಾಂಕಿನಿಂದ 90 ಜನರಿಗೆ 1.27 ರೂ. ಮತ್ತು 55 ಮಂದಿ ಹೊಸ ಸದಸ್ಯರಿಗೆ ಸಾಲ ಬಿಡುಗಡೆ ಆಗಿಲ್ಲ. ಸಂಘದ ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ನಾಯಕ ಅವರು 1.81 ಕೋಟಿ ರೂ. ದುರುಪಯೋಗಪಡಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸಂಘದ ಠರಾವು ಬ್ಯಾಂಕಿಗೆ ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.ಹನಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತ ಸದಸ್ಯರುಗಳು ಸಾಲ ಪಾವತಿಸಿದ್ದರೂ ಸಾಲ ಕಟ್ಟಿಲ್ಲ ಎಂದು ನೋಟಿಸ್ ನೀಡುತ್ತಿದ್ದಾರೆ. ಸಾಲವನ್ನು ಕೂಡ ನೀಡುತ್ತಿಲ್ಲ. ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಎಂ.ಎಸ್. ಪುಷ್ಪಕಲಾ ಅವರು ಹಣದುರುಪಯೋಗ ಮಾಡಿಕೊಂಡು ಸಂಘದ ಕರ್ತವ್ಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರೂ ಬ್ಯಾಂಕಿನ ಮೇಲ್ವಿಚಾರಕರು ಯಾವುದೇ ಕಾನೂನು ಕ್ರಮಜರುಗಿಸಿಲ್ಲ ಎಂದು ದೂರಿದರು.ಹೆಗ್ಗಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೈತರು ಸದಸ್ಯರಿಗೆ ಸಕಾಲದಲ್ಲಿ ಸಾಲ ನೀಡದೆ ವಿಳಂಬ ನೀತಿ ಅನುಸರಿಸುತ್ತಿರುವುದು ರೈತರಿಗೆ ವಿನಾಕಾರಣಕ್ಕೆ ಕಿರುಕುಳಕ್ಕೆ ಕಾರಣವಾಗಿದೆ ಎಂದು ಅವರು ಕಿಡಿಕಾರಿದರು.ಹುಣಸೂರು ಭಾಗದ ರೈತರು ಬೆವರು ಸುರಿಸಿ ಬ್ಯಾಂಕ್ ಗೆ ಸಾಲ ಮರು ಪಾವತಿ ಮಾಡುತ್ತಿದ್ದರೂ ಹೊಸ ಸಾಲ ಕೊಡದೆ ದ್ರೋಹ ಮಾಡುತ್ತಿದ್ದಾರೆ. ರೈತರನ್ನು ಖಾಸಗಿ ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಪಿ.ಎಂ. ಪ್ರಸನ್ನ, ಅಂದಾನಿನಾಯ್ಕ,. ಬಸವರಾಜು, ಎಚ್.ಬಿ. ಶ್ರೀಧರ್, ಎಸ್. ರವಿ, ಚಂದ್ರಶೇಖರ್, ಶಿವಮಲ್ಲೇಗೌಡ, ದೊಡ್ಡಶೆಟ್ಟಿ, ಕಾಳೇಗೌಡ, ಮೂರ್ತಿ, ಎಚ್.ಬಿ. ಮಹದೇವ, ರಾಜಪ್ಪ, ಕುಮಾರ್, ಗಣೇಶ್, ದೊರೆಸ್ವಾಮಿ, ಎಂ. ರಾಜೇಶ್, ಗಿರಿಜಾನಾಯಕ, ಶಂಕರೇಗೌಡ ಮೊದಲಾದವರು ಪಾಲ್ಗೊಂಡಿದ್ದರು.ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.