- ಜಿಲ್ಲಾ ಎಸ್‌ಪಿ ಅವರನ್ನು ನಾಯಿಗೆ ಹೋಲಿಸಿದ್ದು ಸರಿಯಲ್ಲ: ಮಾಜಿ ಶಾಸಕ ರಾಮಪ್ಪ
ಕನ್ನಡಪ್ರಭ ವಾರ್ತೆ ಹರಿಹರ
ಶಾಸಕ ಬಿ.ಪಿ. ಹರೀಶ್ ಬಿಪಿ ಹೆಚ್ಚಿಸಿಕೊಂಡು ನಾಲಿಗೆ ಹರಿಯಬಿಟ್ಟು ಮಾತನಾಡುತ್ತಾರೆ. ಎಸ್‌ಪಿ ಅವರನ್ನು ಪಮೊರಿಯನ್ ನಾಯಿಮರಿಗೆ ಹೋಲಿಸಿರುವುದು ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಪಿ. ಹರೀಶ್ ಅವರು ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಎಸ್‌ಪಿ ಮತ್ತು ಡಿಸಿ ಬಗ್ಗೆ ಹಗುರವಾಗಿ ಉದ್ದಟತನದಿಂದ ಮಾತನಾಡೋದನ್ನು ನಿಲ್ಲಿಸಬೇಕು. ಈ ಹಿಂದೆ ದಾವಣಗೆರೆಯ ಎಸ್‌ಪಿ ಆಗಿದ್ದ ಸೋನಿಯಾ ನಾರಂಗ್ ಆಡಳಿತ ಸಂದರ್ಭದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಉದ್ದಟತನದ ಮಾತುಗಳಿಗೆ ಏನಾಗಿತ್ತು ಎಂಬುದನ್ನು ಹರೀಶ್ ನೆನಪಿಸಿಕೊಳ್ಳಲಿ ಎಂದರು.
ಇವರ ಸಂಸದರ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿ ಬಗ್ಗೆ ಲೋಕಸಭಾ ಅಧಿವೇಶನದಲ್ಲಿ ಒಂದು ಬಾರಿಯೂ ಚರ್ಚೆ ಮಾಡಲಿಲ್ಲ. ಆದರೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರತಿ ಅಧಿವೇಶನದಲ್ಲಿ ಜಿಲ್ಲೆ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತುತ್ತಿರುವುದು ಜನರ ಕಾಳಜಿ ತೋರಿಸುತ್ತದೆ. ಇವರನ್ನು ಮುಂದಿನ ೨೫ ವರ್ಷಗಳ ಕಾಲ ಬಿಜೆಪಿಯವರು ಸೋಲಿಸಲು ಆಗುವುದಿಲ್ಲ ಎಂದರು.
ತಾಲೂಕಿನ ಬೈರನಪಾದ ಯೋಜನೆಗೆ ₹೫೮ ಕೋಟಿ ಅನುದಾನದಲ್ಲಿ ಟೆಂಡರ್ ಪ್ರಕ್ರಿಯೆ ತೆರಳುವ ಸಂದರ್ಭದಲ್ಲಿ ಇದೇ ಬಿಜೆಪಿಯವರು ಅಡ್ಡಿಪಡಿಸಿ, ಈ ಯೋಜನೆ ನನೆಗುದಕ್ಕೆ ಬೀಳುವಂತೆ ಮಾಡಿದ್ದಾರೆ. ಎಸ್‌ಪಿ ಮತ್ತು ಡಿಸಿ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ, ಹರೀಶ್ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ರಾಮಪ್ಪ ಎಚ್ಚರಿಸಿದರು.
ದೂಡಾ ಮಾಜಿ ಸದಸ್ಯ ಜಿ.ವಿ. ವೀರೇಶ್, ಬಿ.ಮುಗ್ದುಂ, ಮಹಮ್ಮದ್ ಫೈರೋಜ್, ನಾಗರಾಜ್, ಸೈಯದ್ ಸನಾವುಲ್ಲಾ, ಮಹಮ್ಮದ್ ಗೌಸ್, ಹಂಚಿನ ನಾಗಣ್ಣ ಸೇರಿದಂತೆ ಇತರರಿದ್ದರು.
(ಕೋಟ್) ಹಿಂದೂ ಮುಸ್ಲಿಂ ಬಾಂಧವರು ಸಹೋದರರಂತೆ ಬಾಳಬೇಕು, ದಾವಣಗೆರೆಯಲ್ಲಿ ಯಾವುದೇ ಗಲಭೆಗಳು ಆಗದಿರಲಿ ಎಂಬ ಸದುದ್ದೇಶದಿಂದ ಮಲ್ಲಿಕಾರ್ಜುನ್ ಅವರು ಯಾರೇ ಗಲಾಟೆ ಮಾಡಿದರು ಮತ್ತು ಪ್ರಚೋದನೆ ನೀಡಿದರೂ ಒದ್ದು ಒಳಗೆ ಹಾಕುತ್ತೇನೆ ಎಂದು ಎಚ್ಚರಿಸಿರುವ ಹೇಳಿಕೆ ಸ್ವಾಗತಿಸುತ್ತೇವೆ.
- - -
ಹರಿಹರ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಮಾಜಿ ಶಾಸಕ ಎಸ್.ರಾಮಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.