ಶಿರಸಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಬಿಜೆಪಿ ಕಾರ್ಯಕರ್ತರೇ ಪ್ರಯತ್ನ ಮಾಡಿದ್ದಾರೆ ಎಂದು ಶಾಸಕ ಶಿವರಾಮ ಹೆಬ್ಬಾರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಶಾಸಕರು ಬಿಜೆಪಿ ತೊರೆದು ಪುನಃ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡತೊಡಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಹೆಬ್ಬಾರ್ ತಮ್ಮ ಬೆಂಗಲಿಗರೊಂದಿಗೆ ಸಭೆ ನಡೆಸಿದ್ದು, ಪುತ್ರನ ನೇತೃತ್ವದಲ್ಲಿ ಬೆಂಬಲಿಗರನ್ನು ಕಾಂಗ್ರೆಸ್ಸಿಗೆ ಸೇರಿಸಲು ಯೋಜನೆ ರೂಪಿಸಿದ್ದಾರೆ.
ಕೆಡಿಸಿಸಿ ಬ್ಯಾಂಕ್ ವಿಶ್ರಾಂತಿಗೃಹದಲ್ಲಿ ಸಭೆ: ನಗರದ ಕೆಡಿಸಿಸಿ ಬ್ಯಾಂಕ್ ವಿಶ್ರಾಂತಿಗೃಹದಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಂತರಿಕ ಸಭೆ ನಡೆಸಿದ ಹೆಬ್ಬಾರ್, ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮೊದಲ ಹಂತವಾಗಿ ಪುತ್ರ ವಿವೇಕ ಹೆಬ್ಬಾರ್ ಜತೆ ಪ್ರಮುಖ ಬೆಂಬಲಿಗರನ್ನು ಕಾಂಗ್ರೆಸ್ ಸೇರ್ಪಡೆ ಮಾಡಲು ನಿರ್ಧರಿಸಿದರು. ಬನವಾಸಿ ಭಾಗದ ೯ ಪಂಚಾಯಿತಿ ಪ್ರಮುಖರು, ತಮ್ಮ ಬೆಂಬಲಿಗರ ಜತೆ ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಬಿಜೆಪಿಗೆ ಬಂದ ನಂತರ ತಮ್ಮ ಗೌರವಕ್ಕೆ ಧಕ್ಕೆ ಮಾಡಲಾಗುತ್ತಿದೆ. ರಾಜಕೀಯ ಪ್ರಭಾವ ಬಳಸಿ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಬಿಜೆಪಿ ಕೆಲ ನಾಯಕರಿಂದ ಸ್ಪಂದನೆ ಸಿಗುತ್ತಿಲ್ಲ ಎಂದು ಹೆಬ್ಬಾರ್ ಅಸಮಾಧಾನ ಹೊರಹಾಕಿದ್ದಾಗಿ ಸಭೆಯಲ್ಲಿ ಭಾಗವಹಿಸಿದ್ದ ಕೆಲ ಬೆಂಬಲಿಗರು ಮಾಹಿತಿ ನೀಡಿದರು.
ವಾರದೊಳಗಡೆ ಸೇರ್ಪಡೆ ದಿನಾಂಕ ನಿಗದಿ: ಮೊದಲ ಹಂತದಲ್ಲಿ ಹೆಬ್ಬಾರ್ ಪುತ್ರ ವಿವೇಕ ಹೆಬ್ಬಾರ್ ಹಾಗೂ ಪ್ರಮುಖ ಬೆಂಬಲಿಗರು ಕಾಂಗ್ರೆಸ್ ಸೇರಲಿದ್ದಾರೆ. ವಾರದೊಳಗೆ ಸೇರ್ಪಡೆ ಕಾರ್ಯ ಆಗಲಿದ್ದು, ಆದರೆ ಹೆಬ್ಬಾರ್ ಅವರು ಬಿಜೆಪಿಯನ್ನು ಅವರಾಗಿ ಬಿಡುವುದಿಲ್ಲ. ಹೆಬ್ಬಾರ್ ಅವರು ಬಿಜೆಪಿಯ ಯಾವುದೇ ಕಾರ್ಯಕ್ರಮ, ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿಲ್ಲ. ಹೀಗಾಗಿ ಪಕ್ಷದಿಂದ ಉಚ್ಚಾಟನೆ ಮಾಡುವುದು, ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಹೆಬ್ಬಾರ್ ಅವರನ್ನು ಉಚ್ಚಾಟನೆ ಮಾಡಿದರೆ ಹೆಬ್ಬಾರ್ ಅವರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಉಚಪಚುನಾವಣೆ ಎದುರಿಸಲು ಕಷ್ಟಸಾಧ್ಯದ ಕಾರಣ ಶಾಸಕರಿದ್ದುಕೊಂಡೇ ಕಾಂಗ್ರೆಸ್‌ಗೆ ಪರೋಕ್ಷ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡವರು ಮಾಹಿತಿ ನೀಡಿದ್ದಾರೆ.ಜಿಲ್ಲಾಧ್ಯಕ್ಷರ ಬಳಿ ದಿನಾಂಕ ಪಡೆದು ಬನವಾಸಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿ ಪಂಚಾಯಿತಿಯಿಂದ ೧೦೦ರಿಂದ ೧೫೦ ಪ್ರಮುಖ ಕಾರ್ಯಕರ್ತರು ಆಗಮಿಸಲು ತಿಳಿಸಿದ್ದಾರೆ. ರಾಜ್ಯದ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.