ಸಿಎಂ ಸಿದ್ದರಾಮಯ್ಯರಿಗೆ ತಾಲೂಕಿನ ಸಮಸ್ಯೆ ಪರಿಹಾರಕ್ಕಾಗಿ ಶಾಸಕ ಎಚ್.ಟಿ.ಮಂಜು ಮನವಿ

KannadaprabhaNewsNetwork | Published : Dec 8, 2024 1:18 AM

ಸಾರಾಂಶ

ತಾಲೂಕಿನ ರೈತ ಸಮುದಾಯದ ಅನುಕೂಲಕ್ಕಾಗಿ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ರೈತ ಭವನ ನಿರ್ಮಾಣ, ತಾಲೂಕಿನ 30ಕ್ಕೂ ಹೆಚ್ಚಿನ ಕೆರೆಗಳನ್ನು ಹೇಮಾವತಿ ನೀರಿನಿಂದ ತುಂಬಿಸುವ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಹಣಕಾಸಿನ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು, ಅಗತ್ಯ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಲೂಕಿನ ಕೆರೆ- ಕಟ್ಟೆಗಳು ಮತ್ತು ರಸ್ತೆ ಹಾಗೂ ಸೇತುವೆಗಳ ದುರಸ್ಥಿಗೆ ಅಗತ್ಯ ಅನುದಾನ ನೀಡುವಂತೆ ಆಗ್ರಹ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಲೂಕಿನ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸುವಂತೆ ಶಾಸಕ ಎಚ್.ಟಿ.ಮಂಜು ಸೇರಿದಂತೆ ಸಾರ್ವಜನಿಕರು ದೂರುಗಳ ಮೂಲಕ ಮನವಿ ಸಲ್ಲಿಸಿದರು.

ಅತಿವೃಷ್ಟಿಯಿಂದ ಹಾನಿಗೀಡಾಗಿರುವ ತಾಲೂಕಿನ ಕೆರೆ- ಕಟ್ಟೆಗಳು ಮತ್ತು ರಸ್ತೆ ಹಾಗೂ ಸೇತುವೆಗಳ ದುರಸ್ಥಿಗೆ ಅಗತ್ಯ ಅನುದಾನ ನೀಡುವಂತೆ ಶಾಸಕ ಎಚ್.ಟಿ.ಮಂಜು ಮನವಿ ಪತ್ರ ಅರ್ಪಿಸಿದರೆ, ಶ್ರೀರಂಗಪಟ್ಟಣದಿಂದ ಚನ್ನರಾಯಪಟ್ಟಣ ಸಂರ್ಕಿಸುವ ರಾಜ್ಯ ಹೆದ್ದಾರಿ 07 ಸಂಪೂರ್ಣ ಹದಗೆಟ್ಟಿದ್ದು ಸದರಿ ರಸ್ತೆಯನ್ನು ದುರಸ್ಥಿಪಡಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ತಾಲೂಕಿನ ರೈತ ಸಮುದಾಯದ ಅನುಕೂಲಕ್ಕಾಗಿ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ರೈತ ಭವನ ನಿರ್ಮಾಣ, ತಾಲೂಕಿನ 30ಕ್ಕೂ ಹೆಚ್ಚಿನ ಕೆರೆಗಳನ್ನು ಹೇಮಾವತಿ ನೀರಿನಿಂದ ತುಂಬಿಸುವ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಹಣಕಾಸಿನ ಕೊರತೆಯಿಂದ ಅರ್ಧಕ್ಕೆ ನಿಂತಿದ್ದು, ಅಗತ್ಯ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ಹಾದುಹೋಗಿರುವ ಹೇಮಾವತಿ ಜಲಾಶಯದ ಎಡದಂಡೆ ನಾಲಾ ವ್ಯಾಪ್ತಿಯ ಎಲ್ಲಾ ವಿತರಣಾ ನಾಲೆಗಳ ಆಧುನೀಕರಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮುಖ್ಯಮಂತ್ರಿಗಳ ಮುಂದೆ ಬೇಡಿಕೆ ಮಂಡಿಸಿದರು.

ಖಾಸಗಿ ವ್ಯಕ್ತಿ ಅತಿಕ್ರಮಿಸಿರುವ ತೇಗನಹಳ್ಳಿ ಕೆರೆ ತೆರವುಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಕಲ್ಪಿಸಬೇಕು. ಕಾಮಗಾರಿ ಮಾಡದಿದ್ದರೂ ಹೇಮಾವತಿ 54ನೇ ವಿತರಣಾ ನಾಲೆಯ ಆಧುನೀಕರಣದ ಹೆಸರಿನಲ್ಲಿ ಮುಂಗಡ ನಕಲಿ ಬಿಲ್ ಪಡೆದಿರುವ ಗುತ್ತಿಗೆದಾರ ಮತ್ತು ಅದಕ್ಕೆ ಸಹಕರಿಸಿರುವ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ರೈತರು ಸಿಎಂಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಸಾರ್ವಜನಿಕರು ಸಂಚರಿಸುವ ಫುಟ್ ಪಾತ್ ಅನ್ನು ಹಣ್ಣು, ಹೂವು ಮಾರುವವರು, ತಳ್ಳು ಗಾಡಿಗಳಲ್ಲಿ ತಿಂಡಿ, ತಿನುಸು ಮಾರುವವರು ಮತ್ತು ಚಿಲ್ಲರೆ ವರ್ತಕರು ಅತಿಕ್ರಮಿಸಿದ್ದು, ತೆರವಿಗೆ ಕ್ರಮ ವಹಿಸಬೇಕು. ಪಟ್ಟಣಕ್ಕೆ ಟ್ರಾಫಿಕ್ ಪೊಲೀಸರ ಠಾಣೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್, ಎಂ.ಆರ್.ಐ ಸ್ಕ್ಯಾನಿಂಗ್ ಸೌಲಭ್ಯ ಕಲ್ಪಿಸಿಕೊಡಬೇಕು. ಪಟ್ಟಣದಿಂದ ಮೈಸೂರು ನಗರಕ್ಕೆ ತಡೆರಹಿತ ಬಸ್ ಸೌಲಭ್ಯ ಒದಗಿಸಿಕೊಡಬೇಕು. ಪಟ್ಟಣದ ಒಳಚರಂಡಿ ವ್ಯವಸ್ಥೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಹೊಸ ಬಡಾವಣೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಪಟ್ಟಣದಲ್ಲಿ ಹದಗೆಟ್ಟಿರುವ ರಸ್ತೆಗಳು, ಚರಂಡಿಗಳನ್ನು ನಿರ್ಮಿಸಿಕೊಡುವಂತೆ ಪಟ್ಟಣ ನಾಗರಿಕ ಹಿತರಕ್ಷಣಾ ಸಮಿತಿಯ ಸದಸ್ಯರು ಅಧ್ಯಕ್ಷ ಬಿ.ಬಿ.ಬಸವೇಗೌಡ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Share this article