ತುಂಬಿದ ಹಳೇಅತ್ತಿಗುಪ್ಪೆ ಕೆರೆಗೆ ಶಾಸಕ ಎಚ್.ಟಿ.ಮಂಜು ಬಾಗಿನ ಅರ್ಪಣೆ

KannadaprabhaNewsNetwork |  
Published : Oct 31, 2024, 12:59 AM IST
30ಕೆಎಂಎನ್ ಡಿ13 | Kannada Prabha

ಸಾರಾಂಶ

ಕ್ಷೇತ್ರದ ಜನರು ಸಾಕಷ್ಟು ಕನಸು ಇಟ್ಟುಕೊಂಡು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಅವರ ಆಶೋತ್ತರಗಳನ್ನು ಈಡೇರಿಸಲು ನಾನು ಸರ್ವಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಕಾಂಗ್ರೆಸ್ ಸರ್ಕಾರ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ನೀಡಲಾರದ ಸ್ಥಿತಿಯಲ್ಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೇಮಾವತಿ ನೀರಿನಿಂದ ಭರ್ತಿಯಾದ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹಳೇ ಅತ್ತಿಗುಪ್ಪೆ ಕೆರೆಗೆ ಶಾಸಕ ಎಚ್.ಟಿ.ಮಂಜು ಬಾಗಿನ ಅರ್ಪಿಸಿದರು.

ಕಾರ್ಯಕರ್ತರು ಮತ್ತು ಅಧಿಕಾರಿಗಳೊಂದಿಗೆ ಕೆರೆಗೆ ಬಾಗಿನ ಅರ್ಪಿಸಿದ ಶಾಸಕ ಮಂಜು ಮಾತನಾಡಿ, ಚನ್ನರಾಯಪಟ್ಟಣ ತಾಲೂಕಿನಲ್ಲಿ ಕಾರ್ಯಾರಂಭ ಮಾಡಿರುವ ಏತ ನೀರಾವರಿ ಯೋಜನೆಯ ಮೂಲಕ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಅವರು ತಾಲೂಕಿನ ಹಳೇ ಅತ್ತಿಗುಪ್ಪೆ ಕೆರೆಗೆ ಹೇಮೆ ನೀರು ಹರಿಸಲು ಸಹಕರಿಸುತ್ತಿದ್ದು ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ನಾನು ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಶಾಸಕನಾಗಿದ್ದೇನೆ. ಸರ್ಕಾರವು ವಿಪಕ್ಷಗಳ ಶಾಸಕರಿರಲಿ ಸ್ಪ-ಪಕ್ಷದ ಶಾಸಕರಿಗೂ ಅನುದಾನ ನೀಡದೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ ಎಂದು ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡದಿರುವ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರದ ಜನರು ಸಾಕಷ್ಟು ಕನಸು ಇಟ್ಟುಕೊಂಡು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಅವರ ಆಶೋತ್ತರಗಳನ್ನು ಈಡೇರಿಸಲು ನಾನು ಸರ್ವಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಕಾಂಗ್ರೆಸ್ ಸರ್ಕಾರ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ನೀಡಲಾರದ ಸ್ಥಿತಿಯಲ್ಲಿದೆ ಎಂದು ಕಿಡಿಕಾರಿದರು.

ಇತ್ತೀಚೆಗೆ ಸುರಿದ ಸತತ ಮಳೆಗೆ ತಾಲೂಕಿನ ಸಂತೇಬಾಚಹಳ್ಳಿ ಮತ್ತು ಕಿಕ್ಕೇರಿ ಹೋಬಳಿಯಲ್ಲಿ ಸಾಕಷ್ಟು ಹಾನಿಯಾಗಿದೆ. ಈ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ಮಾಡಿದ್ದೇನೆ. ಕೆಲವು ಕೆರೆಗಳ ಏರಿ ಕುಸಿತಗೊಂಡಿದ್ದರೆ ಸಾಕಷ್ಟು ಕಡೆ ರಸ್ತೆ ಮತ್ತು ಸೇತುವೆಗಳು ಹಾಳಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ ಎಂದರು.

ಸಂತೇಬಾಚಹಳ್ಳಿ ಹೋಬಳಿಯ ಎಲ್ಲಾ ಕೆರೆಗಳಿಗೆ ಹೇಮೆಯ ನೀರು ತುಂಬಿಸುವ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಮತ್ತು ಶೀಳನೆರೆ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕಟ್ಟಹಳ್ಳಿ ಬಳಿಯ ಐಚನಹಳ್ಳಿ ನೀರಾವರಿ ಯೋಜನೆ ಸೇರಿದಂತೆ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳಿಗೆ ಕೋಟ್ಯಂತರ ರು. ಅನುದಾನ ಬೇಕಾಗಿದೆ ಎಂದರು.

ಅತಿವೃಷ್ಟಿಯಿಂದ ಹಾನಿಗೀಡಾಗಿರುವ ರಸ್ತೆ ಮತ್ತು ಸೇತುವೆಗಳನ್ನು ತುರ್ತು ಸರಿಪಡಿಸಬೇಕು. ಈ ಬಗ್ಗೆ ಸಮಗ್ರ ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ನೀರಾವರಿ ಇಲಾಖೆ ಎಂಜಿನಿಯರಿಗೆ ಸೂಚಿಸಿದ್ದೇನೆ ಎಂದರು.

ಸರ್ಕಾರ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡದೆ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಅಗತ್ಯ ಅನುದಾನ ನೀಡದಿದ್ದರೆ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಅನುದಾನಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದರು.

ಈ ವೇಳೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಕೆ.ಸುಷ್ಮ, ಹೇಮಾವತಿ ಜಲಾಶಯ ಯೋಜನೆ ತಾಲೂಕು ಕಾರ್ಯಪಾಲಕ ಎಂಜಿನಿಯರ್ ಆನಂದ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿರ್ಮಲೇಶ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಲೋಕೇಶ್, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಕುಮಾರ್, ಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ನವೀನ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಮ್, ತಾಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಸಂತೇಬಾ ಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ಕಿಕ್ಕೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿ ಮಂಜೇಗೌಡ, ಸೇರಿದಂತೆ ನೂರಾರು ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ
ಸುದ್ದಿ ಓದದಿದ್ದರೆ ಡಿಜಿಟಲ್‌ ಅರೆಸ್ಟ್‌ ಆಗ್ತಿರಿ!