ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭಾರೀ ಮಳೆಯಿಂದಾಗಿ ತಾಲೂಕಿನ ಸಂತೇಬಾಚಹಳ್ಳಿ ಮತ್ತು ಕಿಕ್ಕೇರಿ ಹೋಬಳಿಯ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಈ ಭಾಗದ ಹಲವು ಗ್ರಾಮಗಳ ಕೆರೆಗಳು ಮತ್ತು ರಸ್ತೆಗಳು ಹಾನಿಗೀಡಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳೊಂದಿಗೆ ತಾಲೂಕಿನ ಕೈಗೋನಹಳ್ಳಿ, ಸಾರಂಗಿ, ಶ್ಯಾರಹಳ್ಳಿ, ಸಂತೇಬಾಚಹಳ್ಳಿ, ಹುಬ್ಬನಹಳ್ಳಿ, ಲೋಕನಹಳ್ಳಿ, ಅಘಲಯ, ದೊಡ್ಡಸೋಮನಹಳ್ಳಿ, ಮಾಳಗೂರು,ಹಲಸನಹಳ್ಳಿ, ಹಳೇ ಅತ್ತಿಗುಪ್ಪೆ, ಮಾದಿಹಳ್ಳಿ, ಅಂಕನಹಳ್ಳಿ, ದೇವರಹಳ್ಳಿ, ಚೌಡೇನಹಳ್ಳಿ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಪೀಡಿತ ಸಾರ್ವಜನಿಕರ ಅಹವಾಲು ಆಲಿಸಿದರು.ನೆರೆ ಹಾವಳಿಯಿಂದ ಹಾನಿಗೀಡಾಗಿರುವ ಸೇತುವೆ ಮತ್ತು ರಸ್ತೆಗಳನ್ನು ತಕ್ಷಣವೇ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಹಳ್ಳದ ನೀರಿನಿಂದ ಕೆಲವು ಕಡೆ ರೈತರಿಗೆ ಬೆಳೆ ಹಾನಿಯಾಗಿದೆ. ತಕ್ಷಣವೇ ಬೆಳೆ ಹಾನಿ ಪ್ರದೇಶದ ರೈತರಿಗೆ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳು ಕ್ರಮ ವಹಿಸುವಂತೆ ಶಾಸಕರು ಸೂಚಿಸಿದರು.
2021ರಲ್ಲಿ ಸುರಿದ ಮಳೆಗೆ ತಾಲೂಕಿನ ಸಂತೇಬಾಚಹಳ್ಳಿ ಕೆರೆ ಏರಿ ಒಡೆದು ಹೋಗಿತ್ತು. ಒಡೆದು ಹೋಗಿರುವ ಕೆರೆ ಏರಿ ಕಾಮಗಾರಿ ನಡೆಯುತ್ತಿದೆ. ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರಿದ ಕೆರೆ ಏರಿ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದು ಶಾಸಕರ ಭೇಟಿ ವೇಳೆ ಕಂಡು ಬಂತು.
ಇದೆಲ್ಲವನ್ನೂ ಗಮನಿಸಿದ ಶಾಸಕ ಎಚ್.ಟಿ.ಮಂಜು ಅವರು, ಕಳಪೆ ಕಾಮಗಾರಿ ನಡೆಸುತ್ತಿರುವ ನೀರಾವರಿ ಇಲಾಖೆ ಎಂಜಿನಿಯರುಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡು ಗುಣಮಟ್ಟದ ಕಾಮಗಾರಿಗೆ ಸೂಚನೆ ನೀಡಿದರು.