- ಶಾಸಕ ಕೆ. ಹರೀಶ್ ಗೌಡ ಸೂಚನೆ
ಮಳೆ ನೀರು ಚರಂಡಿ ಮಾಡಿಸಿಕೊಡಿ, ವಿದ್ಯುತ್ ಕಂಬ ಸ್ಥಳಾಂತರಿಸಿಕೊಡಿ, ವಿದ್ಯುತ್ ದೀಪ ಅಳವಡಿಸಲು ಸೂಚನೆ ನೀಡಿ, ಆಶ್ರಯ ಮನೆಗಳಿಗೆ ಹಕ್ಕು ಖುಲಾಸೆ ಪತ್ರ ಕೊಡಿಸಿಕೊಡಿ ಎಂಬಿತ್ಯಾದಿ ದೂರುಗಳು ಶಾಸಕ ಕೆ. ಹರೀಶ್ ಗೌಡರ ಪಾದಯಾತ್ರೆ ವೇಳೆ ಕೇಳಿ ಬಂತು.
ನಗರ ಪಾಲಿಕೆ ವಾರ್ಡ್ 4ರ ಹೆಬ್ಬಾಳು-ಲೋಕನಾಯಕನಗರ ಪಾದಯಾತ್ರೆ ವೇಳೆ ಪ್ರತಿ ಸೋಮವಾರದಂತೆ ಈ ವಾರವೂ ವಾರ್ಡಿಗೆ ಭೇಟಿ ನೀಡಿ ಸಮಸ್ಯೆ ಆಲಿಸಲು ಮುಂದಾದ ಶಾಸಕ ಕೆ. ಹರೀಶ್ ಗೌಡರು ನಗರ ಪಾಲಿಕೆ ವಾರ್ಡ್ - 4ರ ಹೆಬ್ಬಾಳು- ಲೋಕನಾಯಕನಗರ ಸಮಸ್ಯೆ ಆಲಿಸಿದರು.ಬೆಳಗ್ಗೆ 8 ಕ್ಕೆ ಹೆಬ್ಬಾಳಿನ ಹೆಬ್ಬಾಗಿಲಿನಿಂದ ಆರಂಭವಾಗಿ ಗಣಪತಿ-ಚಾಮುಂಡೇಶ್ವರಿ ದೇವಸ್ಥಾನ, ಸಂಜೀವಿನಿ ವೃತ್ತ, ಕಾಳೇಗೌಡರ ಸೈಟ್ ಮುಖ್ಯರಸ್ತೆ, ಆಶ್ರಯ ಮನೆಗಳ ಬೀದಿ, ನಂದಿ ಸ್ಟೋರ್, ಆಂಜನೇಯಸ್ವಾಮಿ ದೇವಸ್ಥಾನ, ಬಸವನಗುಡಿ ವೃತ್ತ, ಆಶಾ ಮಂದಿರ ರಸ್ತೆ, ಹೆಬ್ಬಾಳ್ ಕಾಲೋನಿಯಲ್ಲಿ ಪಾದಯಾತ್ರೆ ನಡೆಸಿದ ಬಳಿಕ ನಿಂಗಯ್ಯನ ಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜನ ಸಂಪರ್ಕ ಸಭೆ ನಡೆಸಿದರು.
ಸ್ಥಳದಲ್ಲಿದ್ದ ನಗರ ಪಾಲಿಕೆ ಎಂಜಿನಿಯರ್ ಗೆ ಅಗತ್ಯವಿರುವ ರಸ್ತೆಗಳಿಗೆ ಮಳೆ ನೀರು ಚರಂಡಿ ಮಾಡಿಸಲು ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ತಿಳಿಸಿದರು. ಅಲ್ಲಿನ ನಿವಾಸಿಗಳಿಗೆ ಈ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಹುಡ್ಕೋ ಬಡಾವಣೆಯಲ್ಲಿ ಸಾಕಷ್ಟು ಮಂದಿ ಫಲಾನುಭವಿಗಳು ತಮ್ಮ ಮನೆಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದು, ಈ ಮನೆಯನ್ನು ಪ್ರಸ್ತುತ ವಾಸ ಇರುವವರಿಗೆ ಖಾತೆ ಮಾಡಿಕೊಡಲು ನಗರ ಪಾಲಿಕೆ ವಿಳಂಬ ಮಾಡುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಸಲ್ಲಿಸಿದರು. ಜನರಿಗೆ ಕೂಡಲೇ ಖಾತೆ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ತಾಕೀತು ಮಾಡಿದರು.
ಈ ಬಡಾವಣೆಯ ಉದ್ಯಾನವನದಲ್ಲಿ ಗಿಡ-ಗಂಟಿಗಳು ಬೆಳೆದಿದ್ದನ್ನು ಪರಿಶೀಲಿಸಿ ಕೂಡಲೇ ಸ್ವಚ್ಛಗೊಳಿ ಉದ್ಯಾನವನಕ್ಕೆ ಹೊಸ ರೂಪಕೊಡಬೇಕು ಹಾಗೂ ಪಾರ್ಕ್ ನಲ್ಲಿ ವಿದ್ಯುತ್ ದೀಪ ಅಳವಡಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಪೈ. ಶ್ರೀನಿವಾಸ್, ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ವಾರ್ಡ್ ಅಧ್ಯಕ್ಷ ಕೇಬಲ್ ನಾಗಣ್ಣ, ಮುಖಂಡರಾದ ಕೇಬಲ್ ಮಹೇಶ್, ಡಿ.ಸಿ. ನವೀನ್, ಜಯರಾಮೇಗೌಡ, ಅಪ್ಪಾಜಿಗೌಡ, ರವೀಶ್ ಮೊದಲಾದವರು ಇದ್ದರು.