ಕನ್ನಡಪ್ರಭ ವಾರ್ತೆ ಮಂಗಳೂರುರಾಮಮಂದಿರ ಪರವಾಗಿ ತೀರ್ಪು ಬಂದು ಈಗ ಮಂದಿರ ನಿರ್ಮಾಣ ಕೈಗೂಡಿದ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಶ್ರೀರಾಮ ಪ್ರಾಣಪ್ರತಿಷ್ಠೆಯ ದಿನವೇ ಸೋಮವಾರ ದೇವಸ್ಥಾನವೊಂದರಲ್ಲಿ ಉರುಳು ಸೇವೆ ನಡೆಸಿ ಹರಕೆ ತೀರಿಸಿದರು.
ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆಯ ಶುಭ ಸಂದರ್ಭದಲ್ಲಿ ಪುಂಜಾಲಕಟ್ಟೆ ದೈಕಿನಕಟ್ಟೆ ಎಂಬಲ್ಲಿ ಕೊರಗ ಸಮುದಾಯದ ಎಂಟು ಕುಟುಂಬಗಳಿಗೆ ಹಾಗೂ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ ಇಬ್ಬರು ಕರಸೇವಕರನ್ನು ಮಾಜಿ ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.ಆದಿವಾಸಿ ಜನಾಂಗದವರು ರಾಮನ ಜೊತೆ ಬೆರೆಯುತ್ತಿದ್ದರು ಎಂಬ ಕಾರಣಕ್ಕಾಗಿ ಕೊರಗ ಸಮುದಾಯದ ಕುಟುಂಬವನ್ನು ಗುರುತಿಸಿ ಗೌರವಿಸಲಾಗಿದೆ ಎಂದು ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ರಮೇಶ್ ಕೊರಗ, ನಾರಾಯಣ ಕೊರಗ, ಐತ್ತಪ್ಪ ಕೊರಗ, ಸಂಜೀವ ಕೊರಗ, ತನಿಯ ಕೊರಗ ಸೇರಿದಂತೆ ಒಟ್ಟು 8 ಮಂದಿ ಕುಟುಂಬಕ್ಕೆ ಗೌರವ ನೀಡಲಾಗಿದೆ. ಇವರ ಜೊತೆಗೆ ಅಯೋಧ್ಯೆಯಲ್ಲಿ ಕರಸೇವೆಯಲ್ಲಿ ಪಾಲ್ಗೊಂಡ ಲಿಂಗಪ್ಪ ಟೈಲರ್ ಹಾಗೂ ಪ್ರಭಾಕರ್ ಪಿ.ಎಂ. ಅವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ರಂಜಿತ್ ಮೈರ, ವೆಂಕಪ್ಪ ಪರವ, ಜನಾರ್ದನ, ಕಾಂತಪ್ಪ ಪೂಜಾರಿ, ಯಶೋಧರ ಶೆಟ್ಟಿ ದಂಬೆ, ಕೃಷ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.