ಖಾಕಿಪಡೆ ವಿರುದ್ಧ ಗರ್ಜಿಸಿದ ಶಾಸಕ ಕಂದಕೂರ

KannadaprabhaNewsNetwork | Published : Jul 24, 2024 12:24 AM

ಸಾರಾಂಶ

ಯಾದಗಿರಿ ಜಿಲ್ಲೆಯ ಪೊಲೀಸ್ ಇಲಾಖೆ ವಿರುದ್ಧ ಸೋಮವಾರ ಸದನದಲ್ಲಿ ಆಕ್ರೋಶ ವ್ಯಕ್ತವಾದವು. ಖಾಕಿಪಡೆ ನಡೆ ಕುರಿತು ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ವಿಧಾನಸಭೆಯಲ್ಲಿ ಘರ್ಜಿಸಿದರು. ಇದಕ್ಕೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಸೇರಿದಂತೆ ಮಹಿಳಾ ಜನಪ್ರತಿನಿಧಿಗಳು ದನಿಗೂಡಿಸಿದ್ದರು. "ಕನ್ನಡಪ್ರಭ "ದಲ್ಲಿ ಪ್ರಕಟಗೊಂಡಿದ್ದ ವರದಿಗಳು ಇಲ್ಲಿ ಪ್ರದರ್ಶಿಸಿದ್ದು ವಿಶೇಷ.

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ ಜಿಲ್ಲೆಯ ಪೊಲೀಸ್ ಇಲಾಖೆ ವಿರುದ್ಧ ಸೋಮವಾರ ಸದನದಲ್ಲಿ ಆಕ್ರೋಶ ವ್ಯಕ್ತವಾದವು. ಖಾಕಿಪಡೆ ನಡೆ ಕುರಿತು ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ವಿಧಾನಸಭೆಯಲ್ಲಿ ಘರ್ಜಿಸಿದರು. ಇದಕ್ಕೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಸೇರಿದಂತೆ ಮಹಿಳಾ ಜನಪ್ರತಿನಿಧಿಗಳು ದನಿಗೂಡಿಸಿದ್ದರು. "ಕನ್ನಡಪ್ರಭ "ದಲ್ಲಿ ಪ್ರಕಟಗೊಂಡಿದ್ದ ವರದಿಗಳು ಇಲ್ಲಿ ಪ್ರದರ್ಶಿಸಿದ್ದು ವಿಶೇಷ.

* ರೇಪ್‌ ಆದ್ರೆ ಮಾತ್ರ ಪೋಕ್ಸೋ ಎಂದಿದ್ದ ಇನ್ಪೆಕ್ಟರ್‌ !

ಗುರುಮಠಕಲ್‌ ತಾಲೂಕಿನ ಅನಪುರ ಗ್ರಾಮದಲ್ಲಿ ಇದೇ ಜನವರಿ ತಿಂಗಳು ಶಾಲಾ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ ಶಾಸಕ ಕಂದಕೂರು, ಹಿರಿಯ ಅಧಿಕಾರಿಗಳು ಸೇರಿದಂತೆ ಖಾಕಿಪಡೆಯ ನಡೆಯನ್ನು ಸದನದಲ್ಲಿ ತೀವ್ರವಾಗಿ ಖಂಡಿಸಿದರು. ಆರೋಪಿ ಶಿಕ್ಷಕನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸದೇ, ಕೇವಲ ಅಮಾನತು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದಾಗ ಅಲ್ಲಿನ ಇನ್ಪೆಕ್ಟರ್‌ ಒಬ್ಬರು, ಕಿರುಕುಳ ಆಗಿದೆಯೇ ಹೊರತು ರೇಪ್‌ ಆಗಿಲ್ಲವಾದ್ದರಿಂದ ಪೋಕ್ಸೋ ಬರುವುದಿಲ್ಲ ಎಂದು ನನಗೆ ಹಾರಿಕೆಯ ಉತ್ತರ ನೀಡಿದ್ದರು. ಇದರ ಬಗ್ಗೆ ನಾನು ಜಿಲ್ಲಾಧಿಕಾರಿ ಜತೆ ಮಾತನಾಡಿದ ನಂತರ ಪೋಕ್ಸೋ ಪ್ರಕರಣ ದಾಖಲಿಸಲಾಯಿತು ಎಂದರು. ಬೇಜವಬ್ದಾರಿ ಉತ್ತರ ನೀಡಿದ್ದ ಇನ್ಪೆಕ್ಟರ್‌ ಮೇಲೆ ಕ್ರಮ ಕೈಗೊಳ್ಳುವಂತೆ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರಿಗೆ ತಿಳಿಸಿದ್ದೆ. ಆದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದ ಕಿಡಿ ಕಾರಿದರು.

ಶಾಸಕ ಕಂದಕೂರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಸಮಾಧಾನಪಡಿಸಲೆತ್ನಿಸಿದ ಸ್ಪೀಕರ್‌ ಹಾಗೂ ಗೃಹಸಚಿವರು, ಈ ಬಗ್ಗೆ ಕಂದಕೂರ ಮೊದಲೇ ನಮಗೆ ತಿಳಿಸಿದ್ದರು. ಆದ್ದರಿಂದ ಇಲಾಖೆಯು ಇನ್ಪೆಕ್ಟರ್‌ಗೆ ಕಾರಣ ಕೇಳಿ ನೋಟೀಸ್‌ ನೀಡಿದೆ ಎಂದರು. ಈ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷದ ನಾಯಕ ಆರ್. ಅಶೋಕ್‌, ಸುರೇಶಕುಮಾರ್, ಅಶ್ವತ್ಥನಾರಾಯಣ ಸೇರಿದಂತೆ ಅನೇಕ ಸದಸ್ಯರು, ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಜವಾಬ್ದಾರಿಯುತ ಅಧಿಕಾರಿಯೊಬ್ಬ ಶಾಸಕರಿಗೇ ಈ ರೀತಿ ಉತ್ತರಿಸಿದರೆ ಜನಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿ, ಅಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಪರಮೇಶ್ವರ, ನಿಯಮಗಳುನಾರ ಕ್ರಮ ಕೈಗೊಳ್ಳಲಾಗುವುದು. ತಕ್ಷಣಕ್ಕೆ ಅಧಿಕಾರಿ ವರ್ಗಾವಣೆ ಮಾಡಲು ಸೂಚಿಸಲಾಗುವುದು ಎಂದು ಉತ್ತರಿಸಿದರು. ಇದೇ ಸಂದರ್ಭದಲ್ಲಿ ಶಹಾಪುರ ಅರಣ್ಯಾಧಿಕಾರಿಯೊಬ್ಬರ ಕೊಲೆ ಪ್ರಕರಣ ಕುರಿತು ಕನ್ನಡಪ್ರಭ ವರದಿ ಪ್ರಸ್ತಾಪಿಸಿದ ಆರ್. ಅಶೋಕ್‌, ಯಾದಗಿರಿ ಪೊಲೀಸ್‌ ಇಲಾಖೆಯ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದರು.

- ಏನಿದು ಪೋಕ್ಸೋ ಪ್ರಕರಣ ?

ಗುರುಮಠಕಲ್‌ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹಣಮೇಗೌಡ ಕಳೆದ 2-3 ವರ್ಷಗಳಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ಶಾಲಾ ಬಾಲಕಿಯರು, ವಿಚಾರಣೆಗೆ ಹೋಗಿದ್ದ ತಹಸೀಲ್ದಾರರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೆದುರು ಕಣ್ಣೀರಿಟ್ಟಿದ್ದರು. ಸುಮಾರು 30ಕ್ಕೂ ಹೆಚ್ಚು ಬಾಲಕಿಯರು ಅಲ್ಲಿನ ದೌರ್ಜನ್ಯದ ಭೀಕರತೆಯನ್ನು ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿ, ಅಳಲು ತೋಡಿಕೊಂಡಿದ್ದರು.ಇದೇ ಆಧಾರದ ಮೇಲೆ ಶಿಕ್ಷಣ ಇಲಾಖೆ ವರದಿ ನೀಡಿತ್ತು. ಅನುಚಿತ ವರ್ತನೆ ಆರೋಪದಡಿ ಶಿಕ್ಷಕನ ಅಮಾನತುಗೊಳಿಸಲಾಗಿತ್ತು. ಆದರೆ ಆರಂಭದಲ್ಲೇ ಪೋಕ್ಸೋ ಕಾಯ್ದೆ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಹಿಂದೇಟು ಹಾಕಿದ್ದರಿಂದ ಇದಕ್ಕೆ ಶಾಸಕ ಕಂದಕೂರು ಆಕ್ರೋಶ ವ್ಯಕ್ತಪಡಿಸಿದ್ದರು. ಪೋಕ್ಸೋ ಯಾಕೆ ಹಾಕಿಲ್ಲ ಎಂದು ಇನ್ಪೆಕ್ಟರ್‌ರನ್ನು ಕೇಳಿದರೆ, ರೇಪ್‌ ಆಗಿದ್ದರೆ ಮಾತ್ರ ಪೋಕ್ಸೋ ಕಾಯ್ದೆ ಬರುತ್ತದೆ ಸರ್ ಎಂದು ಉತ್ತರಿಸಿದ್ದರಂತೆ. ಇದರ ಬಗ್ಗೆ ಕನ್ನಡಪ್ರಭ ಸತತ ವರದಿಗಳನ್ನು ಪ್ರಕಟಿಸಿತ್ತು.

Share this article