ಅವೈಜ್ಞಾನಿಕ ಯೋಜನೆ ಕೈಬಿಡುವಂತೆ ಎಂಬಿಪಾರಿಗೆ ಮನವಿ---
ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಯಳಂದೂರು ತಾಲೂಕಿನ ಮದ್ದೂರು- ಅಗರ ಕೆರೆಗಳ ನೀರು ಬೆಂಗಳೂರಿನ ದಾಬಸ್ ಪೇಟೆಯಲ್ಲಿರುವ ಕೈಗಾರಿಕಾ ಪ್ರದೇಶವೊಂದಕ್ಕೆ ಕೊಂಡೊಯ್ಯಲು ರೂಪಿಸಿರುವ ಯೋಜನೆ ಅವೈಜ್ಞಾನಿಕ, ಇಂಥ ಯೋಜನೆಯಿಂದ ರೈತರಿಗೆ ಉಪಯೋಗವಿಲ್ಲ. ಈ ಹಿನ್ನೆಲೆ ಸರ್ಕಾರ ತಕ್ಷಣ ಕೈಬಿಡುವಂತೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಕೈಗಾರಿಕಾ ಸಚಿವ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಈ ಕುರಿತು ಚರ್ಚಿಸಿದರು. ಈ ಯೋಜನೆಯಿಂದ ನಮ್ಮ ಭಾಗದ ರೈತರಿಗೆ ಯಾವುದೇ ಉಪಯೋಗವಿಲ್ಲ. ಅಲ್ಲದೇ ಸರ್ಕಾರದ ಬೊಕ್ಕಸಕ್ಕೂ ಹೊರೆಯಾಗಿದ್ದು, ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಬೇಕು. ಸರಗೂರು ಗ್ರಾಮದ ಕಾವೇರಿ ನದಿಯಿಂದ ಯಳಂದೂರು ತಾಲೂಕಿನ ಅಗರ- ಮದ್ದೂರು ಕೆರೆ ತುಂಬಿಸಿ ಬಳಿಕ ದಾಬಸ್‌ಪೇಟೆಯ ಕೈಗಾರಿಕಾ ಪ್ರದೇಶಕ್ಕೆ ನೀರು ತೆಗೆದುಕೊಂಡು ಹೋಗುವ ಯೋಜನೆ ಸರಿಯಲ್ಲ. ಹೀಗಾಗಿ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದರು.ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಚಿಕ್ಕಹೊಳೆ, ಸುವರ್ಣಾವತಿ ಜಲಾಶಯಗಳನ್ನು ತುಂಬಿಸಿದರೆ ರೈತರಿಗೆ ಅನುಕೂಲವಾಗಲಿದ್ದು, ಇದನ್ನು ಸಚಿವರು ಪರಿಶೀಲಿಸಿ ರೈತರಿಗೆ ಅನುಕೂಲಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವರನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಭೇಟಿಯಾಗಿ ಮನವಿ ಸಲ್ಲಿಸಿದರು.