ಸಭೆಗೆ ತಡವಾಗಿ ಬಂದ ಅಧಿಕಾರಿಗಳ ಹೊರಗೆ ನಿಲ್ಲಿಸಿದ ಶಾಸಕ ಮಾನೆ

KannadaprabhaNewsNetwork |  
Published : Aug 27, 2025, 01:01 AM IST
ಹಾನಗಲ್ಲ ತಾಪಂನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿದರು. | Kannada Prabha

ಸಾರಾಂಶ

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸರಿಯಾದ ಸಮಯಕ್ಕೆ ಸಭೆಗೆ ಬಾರದ, ತಿಳಿದಾಗ ಸಭೆಗೆ ಬರುವ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಇಡೀ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಹಾನಗಲ್ಲ: ಸಭೆಗೆ ತಡವಾಗ ಬಂದ 6 ಜನ ಅಧಿಕಾರಿಗಳನ್ನು ಶಾಸಕ ಶ್ರೀನಿವಾಸ ಮಾನೆ ಸಭೆಯಿಂದ ಹೊರಗೆ ನಿಲ್ಲಿಸಿದ ಘಟನೆ ಮಂಗಳವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ್ದ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ವೇಳೆ ನಡೆಯಿತು.

ಭೂಮಾಪನಾ ಇಲಾಖೆಯ ಮೇಲ್ವಿಚಾರಕ ಅಶೋಕ ಮಡಿವಾಳರ, ಏತ ನೀರಾವರಿ ಇಲಾಖೆಯ ರಾಮಕೃಷ್ಣ ಹಾಗೂ ಚಂದ್ರು ಓಲೇಕಾರ, ಸಣ್ಣ ನೀರಾವರಿ ಇಲಾಖೆಯ ರವೀಂದ್ರ ಎಲಿಗಾರ ಹಾಗೂ ಬಡಿಗೇರ, ತೋಟಗಾರಿಕೆ ಇಲಾಖೆಯ ವೀರಭದ್ರ ಸ್ವಾಮಿ ಇವರು ಶಾಸಕರ ಆದೇಶದ ಮೇರೆಗೆ ಸಭೆಯಿಂದ ಹೊರಗೆ ನಿಂತ ಅಧಿಕಾರಿಗಳು.ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸರಿಯಾದ ಸಮಯಕ್ಕೆ ಸಭೆಗೆ ಬಾರದ, ತಿಳಿದಾಗ ಸಭೆಗೆ ಬರುವ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಇಡೀ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಸಮಯಪಾಲನೆ, ಸಭೆಗೆ ಹಾಜರಾಗುವುದನ್ನು ತಪ್ಪಿಸುವ ಅಧಿಕಾರಿಗಳ ಬೇಜವಾಬ್ದಾರಿತನ ತಾಲೂಕಿನ ಆಡಳಿತಕ್ಕೆ ಮಾರಕ ಎಂದು ತರಾಟೆಗೆ ತೆಗೆದುಕೊಂಡರು.

ಸಭೆಗೆ ಬಾರದೆ ಸಹೋದ್ಯೋಗಿಯನ್ನು ಕೆಡಿಪಿ ಸಭೆಗೆ ಕಳಿಸಿದ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಲಿಂಗರಾಜ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎಸ್. ನಾಗರಾಜ ಅವರಿಗೆ ಕಾರಣ ಕೇಳಿ ನೋಟಿಸ್ ಕೊಡಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು. ಖಾಸಗಿ ಆಸ್ತಿಯಲ್ಲಿ ಸರ್ಕಾರಿ ರಸ್ತೆಗಳಿದ್ದರೆ 7 ದಿನಗಳ ಒಳಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಕೃಷಿ ಇಲಾಖೆ ರೈತರ ಕಾಳಜಿ ಮಾಡುತ್ತಿಲ್ಲ. ರಸಗೊಬ್ಬರ ಪೂರೈಸುವಲ್ಲಿ ನಿರ್ಲಕ್ಷ್ಯ ತೋರಿದೆ. ಬೆಳೆಹಾನಿ ಸಮೀಕ್ಷೆ ಮಾಡಿಲ್ಲ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಹಾಗೂ ಕೆಡಿಪಿ ಸದಸ್ಯ ರಾಜಕುಮಾರ ಜೋಗಪ್ಪನವರ ಹರಿಹಾಯ್ದರು.

ಪಶುಪಾಲನೆ ಇಲಾಖೆ ಸೇರಿದಂತೆ ಕೆಲವು ಸರ್ಕಾರಿ ಕಚೇರಿಗಳಲ್ಲಿ ಅನಗತ್ಯವಾಗಿ ಕೆಲವರು ಠಿಕಾಣಿ ಹೂಡಿರುತ್ತಾರೆ. ಜನಪ್ರತಿನಿಧಿಗಳು ಕಚೇರಿಗೆ ಬಂದು ಏನಾದರೂ ಮಾಹಿತಿ ಕೇಳಲು ಮುಂದಾದಾಗಲೂ ಸರಿಯಾದ ಮಾಹಿತಿ ಸಿಗುವುದಿಲ್ಲ. ಜನಪ್ರತಿನಿಧಿಗಳಿಗೆ ಗೌರವವೇ ಇಲ್ಲದ ಸ್ಥಿತಿ ಇದೆ ಎಂದು ಮಹಮ್ಮದ್‌ಹನೀಫ್ ಬಂಕಾಪೂರ ದೂರಿದರು.ತಡಸ್- ಗೊಂದಿ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಹಂಪ್ ನಿರ್ವಹಣೆ ಇಲ್ಲ. ಪ್ಯಾಚ್‌ವರ್ಕ ಗುಣಮಟ್ಟದ್ದಿಲ್ಲ. ಪಟ್ಟಣದಲ್ಲಿನ ಟಿಜಿ ರಸ್ತೆ ಪಕ್ಕದ ಪಾದಚಾರಿ ರಸ್ತೆ ಕಿತ್ತು ಹೋದರೂ ಇಲಾಖೆ ಗಮನಿಸುತ್ತಿಲ್ಲ. ಕಾಡಶೆಟ್ಟಿಹಳ್ಳಿಗೆ ಹೋಗುವ ರಸ್ತೆ ಬಂದ್ ಆಗಿದ್ದು, ಇದಕ್ಕೆ ಕಾನೂನು ಪರಿಹಾರ ಕಂಡುಕೊಳ್ಳುವಲ್ಲಿ ಇಲಾಖೆ ಸ್ಪಂದಿಸುತ್ತಿಲ್ಲ. ಗುಡ್ಡದಮತ್ತಿಹಳ್ಳಿ- ಉಪ್ಪಣಸಿ ರಸ್ತೆ ಕಾಮಗಾರಿಯಾಗಿಲ್ಲ. ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಒಬ್ಬರು ಆಫೀಸಿನಲ್ಲೂ ಇರುವುದಿಲ್ಲ. ಜನಪ್ರತಿನಿಧಿಗಳು, ಸಾರ್ವಜನಿಕರಿಗೂ ಲಭ್ಯವಾಗುವುದಿಲ್ಲ. ಕೆಲಸದ ಮೇಲೂ ಇರುವುದಿಲ್ಲ. ಇದಕ್ಕೆ ಏಕೆ ಕ್ರಮ ಇಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿ ದೇವರಾಜ ಅವರಿಗೆ ಕೆಡಿಪಿ ಸದಸ್ಯರು ಪ್ರಶ್ನಿಸಿದರು.ಮಹಿಳಾ ದೌರ್ಜನ್ಯಕ್ಕೆ ಸಾಂತ್ವನ ಕೇಂದ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ. ಇಲ್ಲಿ ಸಿಬ್ಬಂದಿಯ ಕೊರತೆ ಇದೆ. ತುರ್ತು ಸಂದರ್ಭಕ್ಕಾಗಿ ವಾಹನಗಳ ಅನುಕೂಲವಿಲ್ಲ. ಸಾಂತ್ವನ ಕೇಂದ್ರ 24x7 ಆಗಿ ಕೆಲಸ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಕೆಡಿಪಿ ಸದಸ್ಯೆ ಅನಿತಾ ಡಿಸೋಜಾ ಗಮನ ಸೆಳೆದರು.3 ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡದ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹಾರ ಸಭೆಗಳನ್ನು ನಡೆಸುವಲ್ಲಿ ವಿಫಲವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಸಮಾಜ ಕಲ್ಯಾಣ ಇಲಾಖೆಯ ಲೋಪ ಎಂದು ಶಾಸಕ ಶ್ರೀನಿವಾಸ್ ಮಾನೆ ಸೂಚಿಸಿದರು.ವೇದಿಕೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಪಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ಮಹೇಶ ಬಣಕಾರ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಅನಿತಾ ಡಿಸೋಜಾ, ರಾಜೇಶ ಚಹ್ವಾಣ, ರಾಜಕುಮಾರ ಜೋಗಪ್ಪನವರ, ಮಹ್ಮದಹನೀಫ್ ಬಂಕಾಪೂರ, ಮಾರ್ತಂಡಪ್ಪ ಮರ್ಣಣಮ್ಮನವರ, ತಹಸೀಲ್ದಾರ್ ಎಸ್. ರೇಣುಕಾ, ಪ್ರಕಾಶ ಈಳಿಗೇರ ತಾಪಂ ಆಡಳಿತಾಧಿಕಾರಿ ಶಿವಯೋಗಿ ಎಲಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಆಪ್ತ ಶಾಸಕರ ಜತೆ ಸದನದ ಕೊನೆ ಸಾಲಲ್ಲಿ ಡಿಕೆಶಿ ಚರ್ಚೆ
ಅಹಂಕಾರ, ದರ್ಪ ತೋರದೇ ಎಲ್ಲ ಜನರನ್ನೂ ಗೌರವಿಸಿದ ಶಾಮನೂರು: ಅಣಬೇರು ರಾಜಣ್ಣ