ಕನ್ನಡಪ್ರಭ ವಾರ್ತೆ ಅರಕಲಗೂಡು
ಪಟ್ಟಣದ ದೊಡ್ಡಮ್ಮ ದೇವಾಲಯ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಅರಕಲಗೂಡು ದಸರಾ-2026 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಮಳೆ-ಬೆಳೆಯಿಲ್ಲದೆ ರೈತರು ಹಾಗೂ ಜನಸಾಮಾನ್ಯರು ಕಷ್ಟಪಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ವರ್ಷದ ದಸರಾ ಹಬ್ಬದ ಆಚರಣೆ ವಿಶೇಷ ಪೂಜೆಗಳೊಂದಿಗೆ ವರುಣದೇವನನ್ನು ನಾಡಿನ ಜನತೆ ಭಕ್ತಿಭಾವನೆಯಿಂದ ಪ್ರಾರ್ಥಿಸೋಣ ಎಂದರು.ಮೈಸೂರು ದಸರಾದಲ್ಲಿ ಪ್ರತಿದಿನವೂ ಸಾಂಪ್ರದಾಯಿಕ ಪೂಜೆಗಳು ಮತ್ತು ಕಲಾ ಕಾರ್ಯಕ್ರಮಗಳು ನಡೆಯುವಂತೆ, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ದಸರಾ ಪೂಜೆಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಿ, ಹಬ್ಬದ ಮೆರುಗನ್ನು ಹೆಚ್ಚಿಸಬೇಕು. ಹಾಗೆಯೇ ನಮ್ಮ ಸುತ್ತಮುತ್ತಲಿನವರು, ಸ್ನೇಹಿತರು ಮತ್ತು ಬಂಧುಬಳಗದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ದಸರಾ ವೀಕ್ಷಣೆಗೆ ಆಹ್ವಾನಿಸಿ ಈ ಐತಿಹಾಸಿಕ ಹಬ್ಬವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ವೇದಿಕೆಯಲ್ಲಿನ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಆರಂಭವಾಗಿರುವ ಈ ಪವಿತ್ರ ಕಾರ್ಯವು ದೇವರು ಮತ್ತು ಜನರ ಒಗ್ಗಟ್ಟಿನಿಂದ ಕಡೆಯ ದಿನದವರೆಗೂ ಅತ್ಯಂತ ಯಶಸ್ವಿಯಾಗಿ, ವಿಜೃಂಭಣೆಯಿಂದ ನಡೆಯಲಿ ಎಂದು ಹಾರೈಸುತ್ತೇನೆ. ವರ್ಷವರ್ಷದಂತೆ ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರಗಳನ್ನು ನೆರವೇರಿಸುತ್ತಾ, ಎಲ್ಲರ ಒಮ್ಮತ ಮತ್ತು ಸಹಕಾರದಿಂದ ಈ ಬಾರಿಯ ದಸರಾ ಹಬ್ಬವು ಅತ್ಯಂತ ಯಶಸ್ವಿಯಾಗಿ ಜರುಗಲಿ ಎಂದರು.
ದೊಡ್ಡಮಠಾಧೀಶ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ಸಮಸ್ತ 84 ಲಕ್ಷ ಜೀವರಾಶಿಗಳ ಉಳಿವು ಮತ್ತು ಜೀವಕುಲದ ಹಿತಕ್ಕಾಗಿ ಪ್ರಕೃತಿಯ ಕೊಡುಗೆಯಾದ ಮಳೆ ಮತ್ತು ಭೂಮಿಯ ಫಲವತ್ತತೆ ಅತ್ಯಂತ ಮುಖ್ಯವಾದದ್ದು. ನಾವು ಮಾಡುವ ಪ್ರಾರ್ಥನೆ ಮತ್ತು ಸಂಕಲ್ಪಗಳು ಲೋಕ ಕಲ್ಯಾಣಕ್ಕೆ ಹಾಗೂ ಪ್ರಕೃತಿಯ ಸಮತೋಲನವನ್ನು ಕಾಪಾಡಲು ಖಂಡಿತವಾಗಿಯೂ ಸ್ಫೂರ್ತಿಯಾಗುತ್ತವೆ. ಪಟ್ಟಣದ 18ಕೋಮಿನ ಅಧಿದೇವತೆ ತಾಯಿ ದೊಡ್ಡಮ್ಮ ದೇವಿಯ ಆಶೀರ್ವಾದ ಮುಂಬರುವ ಒಂಬತ್ತು ದಿನಗಳ ಕಾಲ ದೇವಿಯ ಕೃಪೆ, ಆಶೀರ್ವಾದ ಮತ್ತು ಅಭಯ ಪ್ರತಿಯೊಬ್ಬರ ಮೇಲೂ ಇರಲಿ ಎಂದು ಆಶೀರ್ವದಿಸಿದರು.ತಹಸೀಲ್ದಾರ್ ಕೆ.ಸಿ.ಸೌಮ್ಯ ಅವರು ಮಾತನಾಡಿ,ಕ್ಷೇತ್ರದ ಜನತೆಗೆ ಒಳ್ಳೆಯ ಮಳೆ-ಬೆಳೆಯಾಗಿ, ತಾಲೂಕು ಸದಾ ಸುಭೀಕ್ಷವಾಗಿ ಮತ್ತು ಶಾಂತಿಯಿಂದ ಇರಲೆಂದು ಪ್ರಾರ್ಥಿಸಿ , ತುಂಬಾ ಸರಳ, ಅರ್ಥಪೂರ್ಣವಾಗಿ ಈ ಬಾರಿ ಅರಕಲಗೂಡು ದಸರಾ ಆಚರಣೆ ನಡೆಯಲಿದೆ. ಪ್ರತಿಯೊಬ್ಬರು ಸಂಪೂರ್ಣವಾಗಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ದಸರಾ ಆಚರಣೆ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಶ್ರೀಜಯದೇವಸ್ವಾಮೀಜಿ,ಬಸವರಾಜೇಂದ್ರ ಸ್ವಾಮೀಜಿ,ಪಪಂ ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಕಂದಾಯ ಅಧಿಕಾರಿ ಸೋಮಶೇಖರ್,ಸರಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜು, ಮುಖಂಡರಾದ ನರಸೇಗೌಡ,ವೆಂಕಟೇಶ್, ರವಿಕುಮಾರ್, ಶಶಿಕುಮಾರ್ ಇತರರು ಉಪಸ್ಥಿತರಿದ್ದರು.