ದಲಿತರ ರಾಜಕೀಯ ಬೆಳವಣಿಗೆಗೆ ಶಾಸಕ ಪ್ರದೀಪ್ ಈಶ್ವರ್ ಅಡ್ಡಿ ಆರೋಪ

KannadaprabhaNewsNetwork |  
Published : Sep 20, 2024, 01:34 AM IST
ಸಿಕೆಬಿ-3 ಕಾಂಗ್ರೆಸ್ ರಾಜ್ಯ ಯುವ ಕಾರ್ಯದರ್ಶಿ ಎಸ್.ಎಂ.ಜಗದೀಶ್ ದಲಿತ ಪರ ಸಂಘಟನೆಗಳೊಂದಿಗೆ ಸ್ವಪಕ್ಷೀಯ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ನನ್ನನ್ನು ಪಕ್ಷದಿಂದ ಉಚ್ಛಾಟಿಸುವಂತೆ ಆದೇಶ ಹೊರಡಿಸಿದ್ದರು. ನಂತರ ನಾನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ತೆರಳಿ ನಮ್ಮ ಕುಟುಂಬವು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದು ಮನವರಿಕೆ ಮಾಡಿಕೊಟ್ಟ ನಂತರ ನನ್ನ ಉಚ್ಛಾಟನಾ ಆದೇಶ ತೆರವು ಗೊಳಿಸುವಂತೆ ಮನವಿ ಮಾಡಿದಾಗ ಅವರು ಆದೇಶ ಹಿಂಪಡೆದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಾಂಗ್ರೆಸ್ ರಾಜ್ಯ ಯುವ ಕಾರ್ಯದರ್ಶಿ ಎಸ್.ಎಂ.ಜಗದೀಶ್ ದಲಿತ ಪರ ಸಂಘಟನೆಗಳೊಂದಿಗೆ ಸ್ವಪಕ್ಷೀಯ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆಯಿತು.

ನಗರದ ಎಂ.ಜಿ.ರಸ್ತೆಯ ಜೈ ಭೀಮ್ ಹಾಸ್ಟೆಲ್ ಮುಂಭಾಗ ವೇದಿಕೆ ನಿರ್ಮಿಸಿ, ಗುರುವಾರ ದಲಿತ ಪರ ಸಂಘಟನೆಗಳೊಂದಿಗೆ ‘ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹಠಾವೋ, ಎಸ್.ಸಿ,ಎಸ್.ಟಿ ಬಚಾವೋ’ ಎಂದು ಘೋಷಣೆ ಕೂಗಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರ ದಲಿತ ವಿರೋಧಿ ಧೋರಣೆಯನ್ನು ಖಂಡಿಸಿದರು.

ಅಂಬೇಡ್ಕರ್ ರವರ ಭಾವಚಿತ್ರ ಹಿಡಿದು ಧರಣಿ ಕುಳಿತ ಕಾಂಗ್ರೆಸ್ ರಾಜ್ಯ ಯುವ ಕಾರ್ಯದರ್ಶಿ ಎಸ್.ಎಂ.ಜಗದೀಶ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಾವು ಪಕ್ಷದ ಅಧಿಕೃತ ಅಭ್ಯರ್ಥಿ ರಕ್ಷ ರಾಮಯ್ಯ ಪರ ಚುನಾವಣಾ ಪ್ರಚಾರ ನಡೆಸಿದ್ದರೂ ಸಹ ಶಾಸಕ ಪ್ರದೀಪ್ ಈಶ್ವರ್ ರವರು ನನ್ನ ಮೇಲೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇನೆಂದು ಆರೋಪಿಸಿ, ನನ್ನನ್ನು ಪಕ್ಷದಿಂದ ಉಚ್ಛಾಟಿಸುವಂತೆ ಆದೇಶ ಹೊರಡಿಸಿದ್ದರು. ನಂತರ ನಾನು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ತೆರಳಿ ನಮ್ಮ ಕುಟುಂಬವು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದು ಮನವರಿಕೆ ಮಾಡಿಕೊಟ್ಟ ನಂತರ ನನ್ನ ಉಚ್ಛಾಟನಾ ಆದೇಶ ತೆರವು ಗೊಳಿಸುವಂತೆ ಮನವಿ ಮಾಡಿದಾಗ ಅವರು ಆದೇಶ ಹಿಂಪಡೆದರು.

ನಾನು ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರಿಂದ ನನಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವಂತೆ ತಿಳಿಸಿದ್ದರಿಂದ ನಾಮಪತ್ರ ಸಲ್ಲಿಸಿದ್ದೆ, ಆದರೆ ಅದಕ್ಕೆ ಶಾಸಕ ಪ್ರದೀಪ್ ಈಶ್ವರ್ ಆಕ್ಷೇಪಣೆ ಸಲ್ಲಿಸಿದ್ದರು. ಆಗ ಮತ್ತೆ ಡಿ.ಕೆ.ಶಿವಕುಮಾರ್ ಬಳಿ ತೆರಳಿ ವಿಷಯ ತಿಳಿಸಿದಾಗ ಅವರು ಶಾಸಕ ಪ್ರದೀಪ್ ಈಶ್ವರ್ ರಿಗೆ ಪೋನ್ ಮೂಲಕ ವಿಷಯ ತಿಳಿಸಿ, ತನ್ನ ಬಳಿ ಬರುವಂತೆ ತಿಳಿಸಿದಾಗ ಬರದೆ ಮತ್ತೆ ಪೋನ್ ಮೂಲಕ ಎಸ್.ಎಂ.ಜಗದೀಶ್ ಗೆ ಅವಕಾಶ ನೀಡಿದರೆ ತಾವು ರಾಜೀನಾಮೆ ನೀಡುವುದಾಗಿ ಬೆದರಿಕೆವೊಡ್ಡಿ ನನಗೆ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಲು ಅಡ್ಡಿಯಾದರು. ನಮ್ಮ ತಂದೆಯವರ ಬಗ್ಗೆ ಏಕ ವಚನ ಬಳಸಿದ್ದರಿಂದ ಅವರೂ ಸಹ ಬೇಸತ್ತು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಶಾಸಕ ಪ್ರದೀಪ್ ಈಶ್ವರ್ ಅವರು ನಿಷ್ಠಾವಂತ ಕಾಂಗ್ರೆಸ್ಸಿಗರೂ ಹಾಗೂ ದಲಿತರೂ ಆದ ನಾವು ರಾಜಕೀಯವಾಗಿ ಬೆಳೆಯದಂತೆ ಅಡ್ಡಿಯಾಗುತ್ತಿದ್ದಾರೆಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಿ. ವಿ. ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ್ ನಡಿಗೇರ್, ರಾಜ್ಯ ಕಾರ್ಯದರ್ಶಿ ಹನುಮಂತಪ್ಪ .ವೈ. ಎಸ್.ಯಳ್ಳಂಬಳಸೆ, ರಾಜ್ಯ ವಿಭಾಗೀಯ ಅಧ್ಯಕ್ಷ ಸಂಜೀವ್ ಮುರಗೋಡು, ಜಿಲ್ಲಾ ಅಧ್ಯಕ್ಷ ಚಿಕ್ಕಬಳ್ಳಾಪುರ ತಿಮ್ಮರಾಜು, ಉಪಾಧ್ಯಕ್ಷ ದಿಬ್ಬೂರಹಳ್ಳಿ ನಾರಾಯಣಸ್ವಾಮಿ, ಶಿಡ್ಲಘಟ್ಟ ಶಿವಪ್ಪ, ಬಾಲಕೃಷ್ಣ ಗೌರಿಬಿದನೂರು, ನಾಗರಾಜು, ಡಿ.ಎಂ.ದಡಂಘಟ್ಟ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ರೂಪ ವೆಂಕಟೇಶ್ ಗುಡಿಬಂಡೆ ಮತ್ತಿತರ ಪದಾಧಿಕಾರಿಗಳು ಇದ್ದರು.

PREV

Recommended Stories

ಆರೆಸ್ಸೆಸ್‌ ವಿಚಾರಕ್ಕೆ ಪ್ರಿಯಾಂಕ್‌ಗೆ ಬೆದರಿಕೆ ಕರೆ ಮಾಡಿದ್ದವನ ಬಂಧನ
2,350 ಕೋಟಿ ವೆಚ್ಚದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣಕ್ಕೆ ಒಪ್ಪಿಗೆ