ಬಂಟ್ವಾಳ: ಪ್ರತಿಭೆಗಳ ಅನಾವರಣಕ್ಕೆ ಪ್ರಸ್ತುತ ಹೆಚ್ಚಿನ ಅವಕಾಶಗಳು ದೊರೆಯುತ್ತಿದ್ದು, ಸ್ಪರ್ಧೆಯೂ ಹೆಚ್ಚಾಗಿದೆ. ಇದರ ಸದುಪಯೋಗ ಪಡೆದುಕೊಂಡು ಭಾರತ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಎದ್ದು ನಿಲ್ಲಬೇಕು. ದೇಶ ಬಲಿಷ್ಠವಾಗಬೇಕಾದರೆ ಯುವಜನತೆ ಬಲಿಷ್ಠರಾಗಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಸಜೀಪಮೂಡ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ರಿತ್ವಿಕ್ ಪ್ರಧಾನ ಭಾಷಣ ಮಾಡಿದರು. ಬುಡಾ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಹೋರಾಟ ಮತ್ತು ತ್ಯಾಗದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ ಎಂದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದರು.ಸಮಯಪ್ರಜ್ಞೆ ಮೆರೆದು ಶಾಲೆಯಲ್ಲಿ ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್ ಅವರನ್ನು ಸನ್ಮಾನಿಸಲಾಯಿತು. ಅವರ ಪೋಷಕರಾದ ಸುರೇಶ್ ಮತ್ತು ಜಯಂತಿ ಅವರನ್ನು ಗೌರವಿಸಲಾಯಿತು.
ತಾಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್ ಸ್ವಾಗತಿಸಿದರು. ಕಳ್ಳಿಗೆ-ನೆತ್ರಕೆರೆ ದ.ಕ.ಜಿ. ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅವಿನಾಶ್ ಡಿಸೋಜ ನಿರೂಪಿಸಿದರು.