ಕನ್ನಡಪ್ರಭ ವಾರ್ತೆ ಗೋಕಾಕ
ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮವನ್ನು ಜಾತಿ, ಮತ, ಪಂಥ ಮರೆತು ಐತಿಹಾಸಿಕವಾಗಿ ಆನಂದೋತ್ಸವವನ್ನಾಗಿ ಆಚರಿಸೋಣ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.ಬುಧವಾರ ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ 22ರಂದು ನಡೆಯಲಿರುವ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಕ್ಷೇತ್ರದಲ್ಲಿ ಆಚರಿಸುವ ಕಾರ್ಯಕ್ರಮಗಳ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಧಾರ್ಮಿಕ ಕಾರ್ಯಕ್ರಮ ದೇಶದ ಹೆಮ್ಮೆ. ಮೋದಿ ಕರೆ ನೀಡಿದ ದೀಪೋತ್ಸವವನ್ನು ಮನೆ, ಮಂದಿರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಚ್ಚುವುದರ ಮೂಲಕ ವಿಜೃಂಭಣೆಯಿಂದ ಆಚರಿಸೋಣ ಎಂದರು.
ಜ.21 ಮತ್ತು 22ರಂದು ಕ್ಷೇತ್ರದ ಎಲ್ಲ ಗ್ರಾಮ, ಪಟ್ಟಣ, ನಗರಗಳಲ್ಲಿ ಮಠಾಧೀಶರ, ಜನಪ್ರತಿನಿಧಿಗಳ, ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷಾತೀತವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜನತೆ ಆ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಿಭಾವದಿಂದ ಪಾಲ್ಗೊಂಡು ಶ್ರೀರಾಮನ ಅನುಗ್ರಹಕ್ಕೆ ಪಾತ್ರರಾಗಿರಿ ಎಂದು ಕೋರಿದರು.ಮಹಾತ್ಮ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಿಸಲು ಪ್ರಧಾನಿ ಮೋದಿ ಕಾರ್ಯಪ್ರವೃತ್ತರಾಗಿದ್ದು, ರಾಮರಾಜ್ಯದೊಂದಿಗೆ ದೇಶವನ್ನು ವಿಶ್ವಗುರುವನ್ನಾಗಿಸುವ ಅವರ ಪ್ರಯತ್ನಕ್ಕೆ ನಾವು ಕೈಜೋಡಿಸೋಣ. ಶ್ರೀರಾಮನ ಅನುಗ್ರಹದಿಂದ ಈ ಕಾರ್ಯಕ್ರಮ ವಿಶ್ವಮಟ್ಟದಲ್ಲಿ ಐತಿಹಾಸಿಕ ದಾಖಲೆಯಾಗಿ ಎಲ್ಲ ದೇಶದ ಪ್ರತಿನಿಧಿಗಳು, ಸಮುದಾಯದವರು ಶುಭಕೋರುತ್ತಿದ್ದಾರೆ ಎಂದರು.
ರಾಮ ಮಂದಿರ ನಿರ್ಮಾಣಕ್ಕಾಗಿ ಸುಮಾರು 500 ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ನಾವು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಹೋರಾಟ ಮಾಡುವ ಪರಿಸ್ಥಿತಿ ಮನಸ್ಸಿಗೆ ನೋವುಂಟು ಮಾಡುತ್ತಿತ್ತು. ದೇಶದ ಎಲ್ಲ ಜನತೆಗೆ ಆದರ್ಶಪ್ರಾಯರಾದ ಶ್ರೀರಾಮರ ಮಂದಿರ ಉದ್ಘಾನೆಯನ್ನು ನೋಡುವ ಭಾಗ್ಯ ನಮಗೆಲ್ಲ ದೊರೆತಿರುವುದು ನಮ್ಮ ಪುಣ್ಯ. ಇದನ್ನು ನಾವು ಶ್ರೀರಾಮ ನಾಮಜಪ, ಭಜನೆ, ಸತ್ಸಂಗ ಹಾಗೂ ಆರಾಧಿಸುವ ಮೂಲಕ ಆಚರಿಸುವುದರೊಂದಿಗೆ ಐತಿಹಾಸಿಕ ಸಂಭ್ರಮದಲ್ಲಿ ಪಾಲ್ಗೊಳ್ಳೋಣ ಎಂದರು.ವಿದ್ಯಾರ್ಥಿಗಳು ಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ವೀಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ರಜೆ ಘೋಷಿಸಬೇಕೆಂದು ವಿನಂತಿಸಿದ ಅವರು, ಇಂದಿನ ಯುವ ಪಿಳಿಗೆಗೆ ಶ್ರೀ ರಾಮರ ಆದರ್ಶಗಳು ಮಾರ್ಗದರ್ಶನವಾಗಿ ಅವುಗಳ ಆಚರಣೆಯೊಂದಿಗೆ ಅವರ ಭವಿಷ್ಯವು ಉಜ್ವಲವಾಗುತ್ತದೆ. ಅದಕ್ಕಾಗಿ ಈ ಸತ್ಕಾರ್ಯದಲ್ಲಿ ಅವರಿಗೂ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಕೋರಿದರು.
ವೇದಿಕೆಯ ಮೇಲೆ ವಿಶ್ವ ಹಿಂದು ಪರಿಷತನ ಪ್ರಮುಖ ನಾರಾಯಣ ಮಠಾಧಿಕಾರಿ, ಎಂ.ಡಿ ಚುನಮರಿ, ಆನಂದ ಪಾಟೀಲ, ರಾಮಚಂದ್ರ ಕಾಕಡೆ, ಬಿಜೆಪಿ ನಗರ ಅಧ್ಯಕ್ಷ ಭೀಮಶಿ ಭರಮನ್ನವರ, ಲಕ್ಷ್ಮೀ ದೇವಿ ಜಾತ್ರಾ ಕಮೀಟಿ ಪ್ರಭಾಕರ ಚೌಹಾಣ ಇದ್ದರು.--------
ಕೋಟ್..ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಿಸಲು ಪ್ರಧಾನಿ ಮೋದಿಯವರು ಕಾರ್ಯಪ್ರವೃತ್ತರಾಗಿದ್ದು, ರಾಮರಾಜ್ಯದೊಂದಿಗೆ ಭಾರತ ದೇಶವನ್ನು ವಿಶ್ವಗುರುವನ್ನಾಗಿಸುವ ಪ್ರಧಾನಿ ಪ್ರಯತ್ನಕ್ಕೆ ನಾವೆಲ್ಲ ಕೈಜೋಡಿಸೋಣ. ಶ್ರೀರಾಮನ ಅನುಗ್ರಹದಿಂದ ಈ ಕಾರ್ಯಕ್ರಮ ವಿಶ್ವ ಮಟ್ಟದಲ್ಲಿ ಐತಿಹಾಸಿಕ ದಾಖಲೆಯಾಗಿ ಎಲ್ಲ ದೇಶದ ಪ್ರತಿನಿಧಿಗಳು, ಸಮುದಾಯದವರು ಶುಭಕೋರುತ್ತಿದ್ದಾರೆ.
- ರಮೇಶ ಜಾರಕಿಹೊಳಿ. ಶಾಸಕ