ಶ್ರೀವಾಲ್ಮೀಕಿ ಮಹರ್ಷಿ ಆದಿವಾಸಿ ಬುಡಕಟ್ಟು ವಸತಿ ನಿಲಯಕ್ಕೆ ಶಾಸಕ ರವಿಕುಮಾರ್ ಭೇಟಿ, ಪರಿಶೀಲನೆ

KannadaprabhaNewsNetwork |  
Published : Jan 26, 2025, 01:30 AM IST
ಸುದ್ದಿಚಿತ್ರ ೧ ಶಿಡ್ಲಘಟ್ಟ ತಾಲ್ಲೂಕಿನ ಬಚ್ಚನಹಳ್ಳಿ ಬಳಿಯಿರುವ ಶ್ರೀವಾಲ್ಮೀಕಿ ಮಹರ್ಷಿ ಆದಿವಾಸಿ ಬುಡಕಟ್ಟು ವಸತಿ ನಿಲಯಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಮತ್ತು ತಹಶೀಲ್ದಾರ್ ಬಿ.ಎನ್.ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು | Kannada Prabha

ಸಾರಾಂಶ

ಪರಿಶೀಲನೆ ವೇಳೆ ವಸತಿ ನಿಲಯದಲ್ಲಿ ಸ್ವಚ್ಛತೆ ಕೊರತೆ ಕಂಡು ಬಂತು. ಶೌಚಾಲಯದಲ್ಲಿ ದುರ್ವಾಸನೆ ಮೂಗಿಗೆ ಬಡಿಯಿತು. ವಸತಿ ನಿಲಯದ ಆವರಣದಲ್ಲಿ ಕಸ ಕಡ್ಡಿ ಕಣ್ಣಿಗೆ ಬಿತ್ತು. ಸಿಗುತ್ತಿರುವ ಸವಲತ್ತುಗಳ ಬಗ್ಗೆ ವಸತಿ ನಿಲಯದ ಮಕ್ಕಳನ್ನೇ ಕೇಳಿ ತಿಳಿದುಕೊಂಡರು.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ತಾಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಬಚ್ಚನಹಳ್ಳಿ ಬಳಿಯಿರುವ ಶ್ರೀವಾಲ್ಮೀಕಿ ಮಹರ್ಷಿ ಆದಿವಾಸಿ ಬುಡಕಟ್ಟು ವಸತಿ ನಿಲಯಕ್ಕೆ ಶಾಸಕ ಬಿ.ಎನ್. ರವಿಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಪರಿಶೀಲನೆ ವೇಳೆ ವಸತಿ ನಿಲಯದಲ್ಲಿ ಸ್ವಚ್ಛತೆಯ ಕೊರತೆ ಸೇರಿ ಕಣ್ಣಿಗೆ ಕಂಡ ಸಮಸ್ಯೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ತಹಸೀಲ್ದಾರ್ ಬಿ.ಎನ್.ಸ್ವಾಮಿ ಜತೆ ಭೇಟಿ ನೀಡಿದ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರು, ವಸತಿ ನಿಲಯದ ಅಡುಗೆ ಮನೆ, ತರಗತಿ ಕೊಠಡಿಗಳು, ಶೌಚಾಲಯ, ಗ್ರಂಥಾಲಯ ಕೊಠಡಿಗಳನ್ನು ಪರಿಶೀಲಿಸಿ ವಸತಿ ನಿಲಯದಲ್ಲಿ ಮಕ್ಕಳಿಗೆ ಸಿಗುತ್ತಿರುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಪರಿಶೀಲನೆ ವೇಳೆ ವಸತಿ ನಿಲಯದಲ್ಲಿ ಸ್ವಚ್ಛತೆ ಕೊರತೆ ಕಂಡು ಬಂತು. ಶೌಚಾಲಯದಲ್ಲಿ ದುರ್ವಾಸನೆ ಮೂಗಿಗೆ ಬಡಿಯಿತು. ವಸತಿ ನಿಲಯದ ಆವರಣದಲ್ಲಿ ಕಸ ಕಡ್ಡಿ ಕಣ್ಣಿಗೆ ಬಿತ್ತು. ಸಿಗುತ್ತಿರುವ ಸವಲತ್ತುಗಳ ಬಗ್ಗೆ ವಸತಿ ನಿಲಯದ ಮಕ್ಕಳನ್ನೇ ಕೇಳಿ ತಿಳಿದುಕೊಂಡರು.

ಸ್ವಚ಼್ಛತೆ ಇಲ್ಲದ ಕುರಿತು ವಸತಿ ನಿಲಯದ ಮೇಲ್ವಿಚಾರಕರು ಹಾಗೂ ಪ್ರಾಂಶುಪಾಲರ ಬಳಿ ಚರ್ಚಿಸಿದ ಶಾಸಕರು ಕ್ರಮವಹಿಸುವಂತೆ ಸೂಚಿಸಿದರು.

ವಸತಿ ನಿಲಯದ ಆವರಣದಲ್ಲಿ ನೆಲಕ್ಕೆ ಟೈಲ್ಸ್ ಹಾಕಲು ಕೂಡಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಿ, ಬೇಕಾದ ಎಲ್ಲ ಸಾಮಗ್ರಿಗಳನ್ನು ನಾನು ವೈಯಕ್ತಿಕವಾಗಿ ಕಳುಹಿಸುತ್ತೇನೆ ಎಂದು ವಸತಿ ನಿಲಯದ ಮುಖ್ಯಸ್ಥರಿಗೆ ತಿಳಿಸಿದರು.

ವಾಲ್ಮೀಕಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಂಕ್ ಮುನಿಯಪ್ಪ, ತಾದೂರು ರಘು, ಸ್ಥಳೀಯ ಮುಖಂಡರು, ಅನು ಅಕ್ಕ ತಂಡದ ಸ್ವಯಂ ಸೇವಕರು ಹಾಜರಿದ್ದರು.

---------

ಬಾಕ್ಸ್

‘ಸರ್ಕಾರಿ ಶಾಲೆಗಳನ್ನು ಉಳಿಸಿ’ ಅಭಿಯಾನ ನಡೆಸುತ್ತಿರುವ ಕನ್ನಡತಿ ಅಕ್ಕ ಅನು ಅವರು ಬಚ್ಚನಹಳ್ಳಿಯ ಶ್ರೀವಾಲ್ಮೀಕಿ ಮಹರ್ಷಿ ಆದಿವಾಸಿ ಬುಡಕಟ್ಟು ವಸತಿ ನಿಲಯಕ್ಕೆ ಸುಣ್ಣ ಬಣ್ಣ ಬಳಿದು ಸಿಂಗರಿಸುವ ಕೆಲಸಕ್ಕೆ ಮುಂದಾಗಿದ್ದು, ಅದಕ್ಕೆ ತಗಲುವ ಸುಣ್ಣ ಬಣ್ಣವನ್ನು ಕೊಡುಗೆಯಾಗಿ ನೀಡುವಂತೆ ಶಾಸಕ ಬಿ.ಎನ್.ರವಿಕುಮಾರ್ ಅವರಲ್ಲಿ ಈ ವೇಳೆ ಮನವಿ ಮಾಡಿದರು.

ರಾಜ್ಯಾದ್ಯಂತ ‘ಸರ್ಕಾರಿ ಶಾಲೆಗಳನ್ನು ಉಳಿಸಿ’ ಎನ್ನುವ ಅಭಿಯಾನದ ಕುರಿತು ಶಾಸಕರಿಗೆ ವಿವರಿಸಿದ ಅಕ್ಕ ಅನು, ಇದುವರೆಗೂ ರಾಜ್ಯದ ೨೫ ಜಿಲ್ಲೆಗಳ ೧೪೦ ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಬಳಿದು ಸಿಂಗರಿಸಿದ್ದೇವೆ. ನಮ್ಮ ೧೫ ಮಂದಿಯ ತಂಡ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದೇವೆ ಎಂದರು.

ನಾವು ಯಾರಿಂದಲೂ ಹಣವನ್ನು ಸಂಗ್ರಹಿಸುವುದಿಲ್ಲ. ಸುಣ್ಣ ಬಣ್ಣವನ್ನು ಮಾತ್ರ ದಾನಿಗಳಿಂದ ಪಡೆದುಕೊಳ್ಳುತ್ತೇವೆ. ನಮ್ಮ ತಂಡದಲ್ಲಿರುವ ಸ್ವಯಂ ಸೇವಕರೆ ಕೆಲಸ ಮಾಡುತ್ತೇವೆ. ಊರಿನವರೊಂದಿಗೆ ಬೆರೆತು ಅಲ್ಲೇ ಊಟ ನಿದ್ದೆ ಮಾಡುತ್ತೇವೆ ಎಂದು ಅಭಿಯಾನದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಅನು ಅಕ್ಕ ಅವರ ಮನವಿಗೆ ಸ್ಪಂದಿಸಿದ ಶಾಸಕರು, ಸಂಪೂರ್ಣ ಬಣ್ಣವನ್ನು ಕೊಡಿಸುವುದಾಗಿ ಮತ್ತು ಈ ವಸತಿ ನಿಲಯದಲ್ಲಿ ಕೈಗೊಳ್ಳುವ ಇತರೆ ಅಭಿವೃದ್ಧಿ ಕೆಲಸಕ್ಕೂ ಅಗತ್ಯವಾದ ಎಲ್ಲ ನೆರವನ್ನೂ ಶಾಸಕರ ನಿಧಿ ಮತ್ತು ಸ್ವಂತವಾಗಿ ನೀಡುವುದಾಗಿ ಹೇಳಿದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ