ಹಳಿಯಾಳ: ಭಾರತ ಕಂಡ ಹಿರಿಯ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿರುವುದು ವಿಷಾದನೀಯ ಎಂದು ಶಾಸಕ ಆರ್.ವಿ. ದೇಶಪಾಂಡೆ ಸಂತಾಪ ವ್ಯಕ್ತಪಡಿಸಿದ್ದಾರೆ.
21ನೇ ಶತಮಾನದ ಶಿಕ್ಷಣದ ಆಶೋತ್ತರಗಳನ್ನು ಕೈಗೂಡಿಸುವಂತೆ ಮಾಡುವ ಹೊಸ ವ್ಯವಸ್ಥೆಯಾದ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ರೂಪಿಸುವಲ್ಲಿ ಹಾಗೂ ಅನುಷ್ಠಾನಗೊಳಿಸುವುದರಲ್ಲಿ ಇವರ ನೇತೃತ್ವದ ಸಮಿತಿ ನೀಡಿದ ಕೊಡುಗೆ ಗಣನೀಯ ಎಂದು ಹೇಳಿದ್ದಾರೆ.
ಪಶ್ಚಿಮ ಘಟ್ಟಗಳ ಪರಿಸರದ ಸೂಕ್ಷ್ಮ ಪ್ರದೇಶಗಳನ್ನು ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ 2013ರಲ್ಲಿ ವರದಿ ಕೊಟ್ಟಿದ್ದರು. ಇವರ ಸಾಧನೆಗೆ ಭಾರತ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (1982), ಪದ್ಮಭೂಷಣ (1992), ಪದ್ಮವಿಭೂಷಣ (2000) ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.ಬಾಹ್ಯಾಕಾಶ ಕ್ಷೇತ್ರವಲ್ಲದೇ ರಾಜಕೀಯ, ಶಿಕ್ಷಣ, ಪರಿಸರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದ ಡಾ.ಕೆ.ಕಸ್ತೂರಿರಂಗನ್ ಸಾಧನೆ ಅಜರಾಮರವಾಗಿದೆ.
ನಮ್ಮ ರಾಜ್ಯದ ಬಗ್ಗೆ ಇವರಿಗೆ ಅಪಾರ ಪ್ರೀತಿ, ಕಾಳಜಿ ಇತ್ತು. ಅವರ ಅಗಲಿಕೆಯ ದುಃಖದಲ್ಲಿ ಭಾಗಿಯಾಗಿದ್ದು, ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.