ಔರಾದ್: ಮಾಜಿ ಎಂಎಲ್ಸಿ ವಿಜಯಸಿಂಗ್ ಅವರ ಜನಪ್ರಿಯತೆ ಸಹಿಸಿಕೊಳ್ಳದ ಶಾಸಕ ಶರಣು ಸಲಗರ್ ಅವರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ್ ಖಂಡಿಸಿದ್ದಾರೆ.
ಶಾಸಕ ಶರಣು ಸಲಗರ್ ಅವರು ಪದೇ ಪದೇ ವಿಜಯಸಿಂಗ್ ಅವರ ಹೆಸರು ಬಳಸಿಕೊಂಡು ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಿತಿ ಕೇಂದ್ರದಿಂದ ಮಾಡಿದ ಕಾಮಗಾರಿಗಳು ಕಳಪೆ ಮಟ್ಟದಿಂದ ನಡೆಯುತ್ತಿವೆ ಅದನ್ನು ವಿಜಯಸಿಂಗ್ ಅವರು ಬೆಳಕಿಗೆ ತಂದಿದ್ದರು ಮತ್ತು ಗುಣಮಟ್ಟ ಕಾಮಗಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಈ ವಿಷಯವನ್ನು ಮುಚ್ಚಿ ಹಾಕಲು ಮತ್ತು ಜನರ ಗಮನ ಬೇರೆ ಕಡೆ ಸೆಳೆಯಲು ಶಾಸಕರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಜಯಸಿಂಗ್ ಅವರ ಸರಳತೆಯು ಸಲಗರ್ ಅವರಿಗೆ ಇನ್ನೂ ಗೊತ್ತಿಲ್ಲ ಅನಿಸುತ್ತೆ. ವಿಧಾನಪರಿಷತ್ ಸದಸ್ಯರಾಗಿದ್ದಾಗ ವಿಜಯಸಿಂಗ್ ಅವರು ಒಂದೇ ಒಂದು ಅಂಗರಕ್ಷಕರನ್ನು(ಗನ್ ಮ್ಯಾನ್) ಕೂಡ ತೆಗೆದುಕೊಂಡಿಲ್ಲ. ಮಾಜಿ ಮುಖ್ಯಮಂತ್ರಿಯ ಮಗನಾದರೂ ಎಲ್ಲೂ ಅಹಂಕಾರ ತೋರಿಸಿಲ್ಲ ಅಧಿಕಾರದ ದುರ್ಬಳಕೆ ಮಾಡಿಲ್ಲ ಆದರೆ ಶಾಸಕರು ವಿಜಯಸಿಂಗ್ ಅವರ ವಿರುದ್ಧ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಸಣ್ಣತನ ತೋರಿಸುತ್ತಿದ್ದಾರೆ ಎಂದು ಕೆಪಿಸಿಸಿ ಸಾಮಾಜಿಕ ಮಾಧ್ಯಮ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ ಕೊಳ್ಳುರ್ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.