ಶಾಸಕ ಸುಬ್ಬಾರೆಡ್ಡಿ ಅನರ್ಹ: ಪ್ರಜಾಪ್ರಭುತ್ವಕ್ಕೆ ಸಂದ ಜಯ

KannadaprabhaNewsNetwork |  
Published : Feb 19, 2026, 02:00 AM IST
18ಬಿಜಿಪಿ-2 | Kannada Prabha

ಸಾರಾಂಶ

ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನದ ಆಯ್ಕೆಯನ್ನು ರದ್ದು ಮಾಡಿ ನನ್ನನ್ನು ಜಯಶಾಲಿ ಎಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದೆ.

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಜನರಿಗೆ ಮತ್ತು ಚುನಾವಣಾ ಆಯೋಗಕ್ಕೆ ವಂಚಿಸಿರುವುದು ಸಾಬೀತು ಆಗಿರುವ ಹಿನ್ನೆಲೆಯಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಶಾಸಕ ಸ್ಥಾನವನ್ನು ಹೈಕೋರ್ಟ್ ಅಸಿಂಧುಗೊಳಿಸಿ ಆದೇಶಿಸಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ಬಿಜೆಪಿ ಮುಖಂಡ ಸಿ.ಮುನಿರಾಜು ತಿಳಿಸಿದ್ದಾರೆ.

ಪಟ್ಟಣದ ಟಿ.ಬಿ.ಕ್ರಾಸ್‍ನಲ್ಲಿರುವ ಬಿಜೆಪಿ ಮುಖಂಡ ಸಿ.ಮುನಿರಾಜು ಅವರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 2023ರಲ್ಲಿ ನಡೆದ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಎಸ್.ಎನ್.ಸುಬ್ಬಾರೆಡ್ಡಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಫಲಿತಾಂಶಕ್ಕೆ ಮುನ್ನಾ ತಮ್ಮ ಚುನಾವಣೆ ಘೋಷಣಾ ಪ್ರಮಾಣ ಪತ್ರದಲ್ಲಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಜನರಿಗೆ ಹಾಗೂ ಆಯೋಗಕ್ಕೆ ವಂಚನೆ ಮಾಡಿರುವುದಾಗಿ ನಾನು ಇದಕ್ಕೆ ಸಂಬಂಧಪಟ್ಟ ಸಂಪೂರ್ಣ ದಾಖಲೆಗಳನ್ನು ಸಂಗ್ರಹಿಸಿ ಹೈಕೋರ್ಟ್‍ಗೆ ತಕರಾರು ಅರ್ಜಿಯನ್ನು ಸಲ್ಲಿಸಿ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನದ ಆಯ್ಕೆಯನ್ನು ರದ್ದು ಮಾಡಿ ನನ್ನನ್ನು ಜಯಶಾಲಿ ಎಂದು ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದೆ. ಅದರಂತೆ ಘನ ನ್ಯಾಯಾಲಯ ಅಸ್ತಿ ವಿವರಗಳನ್ನು ಮುಚ್ಚಿಟ್ಟಿರುವ ಹಾಗೂ ತೆರಿಗೆ ವಂಚನೆ ಇತ್ಯಾದಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ ತೀರ್ಪು ನೀಡಿದೆ ಎಂದರು.

ಭ್ರಷ್ಟಾಚಾರ ಮಾಡಿ ಕ್ಷೇತ್ರದ ಜನತೆಗೆ ಮೋಸ ಮಾಡಿರುವಂತಹ ಒಬ್ಬ ಶಾಸಕರಿಗೆ ನ್ಯಾಯಾಲಯ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಸಿಂಧುಗೊಳಿಸುವ ಮೂಲಕ ಶಿಕ್ಷೆ ವಿಧಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ಜನರ ಮೇಲೆ ಹೊರೆ ಹೇರಿರುವುದಲ್ಲದೆ ಅನೇಕ ಹಗರಣಗಳಲ್ಲಿ ತೊಡಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಪಕ್ಷದ ಮುಖಂಡರು ಹೋರಾಟ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಭವಿಷ್ಯ ನುಡಿದರು.

ಎಸ್.ಎನ್.ಸುಬ್ಬಾರೆಡ್ಡಿ ಸಾವಿರಾರು ಎಕರೆಯಷ್ಟು ಜಮೀನು ನುಂಗಿದ್ದಾರೆ. ದಲಿತರ ಜಮೀನು ಸಹ ಬಿಟ್ಟಿಲ್ಲ. ಅವರ ವಿರುದ್ಧವಾಗಿ ಮಾತನಾಡುವವರಿಗೆ ಅಟ್ರಾಸಿಟಿ ಕೇಸುಗಳನ್ನು ಹಾಕಿಸಿದ್ದಾರೆ. ಇನ್ನೂ ಸಾಕಷ್ಟು ಹಗರಣಗಳಿವೆ. ಮುಂದಿನ ದಿನಗಳಲ್ಲಿ ಅವುಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್, ಗುಡಿಬಂಡೆ ಅಧ್ಯಕ್ಷ ಗಂಗಿರೆಡ್ಡಿ, ಮುಖಂಡರಾದ ಮಿಟ್ಟೇಮರಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ.ಎಲ್ ನರಸಿಂಹಯ್ಯ, ಕೆ.ಟಿ.ವೀರಾಂಜನೇಯಲು, ಆರ್.ವೆಂಕಟೇಶ್, ಲೋಕೇಶ್, ಧೀರೆಜ್, ಚಿನ್ನಪೂಜಪ್ಪ, ಆರ್.ವಿ.ವೆಂಕಟೇಶ್, ರಂಗಾರೆಡ್ಡಿ ಗಂಗರಾಜು, ರಾಮಚಂದ್ರ, ಸೀತಾರಾಮನಾಯ್ಕ್, ಬಯ್ಯಪ್ಪ, ಮಂಜುಳಮ್ಮ, ರೂಪ, ನಂದಿನಿ, ಕೃಷ್ಣವೇಣಿ ಮತ್ತಿತರರು ಇದ್ದರು.

18ಬಿಜಿಪಿ-2: ಬಾಗೇಪಲ್ಲಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರ ಪಾಪರ್‌ ಆದರೂ ಕೈ ಶಾಸಕರು ವಿದೇಶಕ್ಕೆ: ಅಶೋಕ್‌
ಮಹಿಳೆ ಮುಂದಿಟ್ಟು ಹನಿಟ್ರ್ಯಾಪ್‌ಗೆ ಮುಂದಾಗಿದ್ದ ವಕೀಲೆ ಬಂಧನ