ಕಾರ್ಕಳ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾರ್ಕಳ ನಗರದಲ್ಲಿ ಭಾನುವಾರ ನಡೆದ ತಾಯಿ ಭುವನೇಶ್ವರಿ ದೇವಿಯ ಭವ್ಯ ಮೆರವಣಿಗೆಗೆ ಶಾಸಕ ವಿ. ಸುನೀಲ್ ಕುಮಾರ್ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಿದರು.ಕಾರ್ಕಳದ ಅನಂತಶಯನದಿಂದ ಆರಂಭಗೊಂಡ ಭುವನೇಶ್ವರಿ ದೇವಿಯ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ವೈಭವವನ್ನು ಸಾರಿತು. ಅನಂತಶಯನದಿಂದ ಹೊರಟ ಮೆರವಣಿಗೆ ಬಸ್ ನಿಲ್ದಾಣ, ಮೂರು ರಸ್ತೆ ಮಾರ್ಗವಾಗಿ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಸಾಗಿ ಮಂಜುನಾಥ ಪೈ ಸಭಾಂಗಣ ತಲುಪಿತು.
ಮಂಜುನಾಥ ರೋವರ್ ರೇಂಜರ್ಸ್ ತಂಡದ ಸದಸ್ಯರು ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಡೆಸಿದ ಶಿಸ್ತುಬದ್ಧ ಪಥಸಂಚಲನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಬಳಿಕ ಮಂಜುನಾಥ ಪೈ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅವರೊಂದಿಗೆ ಕಾರ್ಕಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್, ಪುರಸಭೆ ಮುಖ್ಯಾಧಿಕಾರಿ ಲೈಲಾ ಥೋಮಸ್, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಕೊಂಡಳ್ಳಿ ಸೇರಿದಂತೆ ವಿವಿಧ ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.