27ರಿಂದ 29 ರವರೆಗೂ ರಾಜ್ಯಮಟ್ಟದ ಹ್ಯಾಂಡ್‌ಬಾಲ್ ಕ್ರೀಡೆ ಯಶಸ್ಸಿಗೆ ಸಹಕಾರ ಭರವಸೆ
ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಂಗಳವಾರ ಜಿಲ್ಲಾ ಕ್ರೀಡಾಂಗಣಕ್ಕೆ ದಿಢೀರ್ ಭೇಟಿ ನೀಡಿ ಆಟದ ಮೈದಾನ ಪರಿಶೀಲಿಸಿ, ಅಧಿಕಾರಿಗಳಿಂದ ಮತ್ತು ಕ್ರೀಡಾಪಟುಗಳಿಂದ ಮಾಹಿತಿ ಪಡೆದರಲ್ಲದೇ ಇಲ್ಲಿ ಆಗಬೇಕಾಗಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಯೂತ್ ಹಾಸ್ಟೆಲ್ ಸಭಾಂಗಣದಲ್ಲಿ ಕೆಲ ಸಮಯ ಚರ್ಚೆ ನಡೆಸಿ ಪರಿಹರಿಸುವ ಭರವಸೆ ನೀಡಿದರು.
ಇದೇ ತಿಂಗಳು 27 ರಿಂದ 29 ರ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಹ್ಯಾಂಡ್‌ಬಾಲ್ ಪಂದ್ಯಾವಳಿ ಯಶಸ್ವಿಗೆ ಸಂಪೂರ್ಣ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.ಸಂಬಂಧಪಟ್ಟ ಜಿಲ್ಲಾ ಕ್ರೀಡಾಂಗಣದ ಅಧಿಕಾರಿಗಳೊಂದಿಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಶೌಚಾಲಯ, ನೀರಿನ ಸರಬರಾಜಿನಲ್ಲಿ ವ್ಯತ್ಯಯ ಇದೆ ಎಂಬ ದೂರು ಕೇಳಿಬಂದಿದೆ. ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಾಲಿ ಇರುವ ಆಟದ ಮೈದಾನಗಳಿಗೆ ಬೇಕಾಗಿರುವ ಸೌಲಭ್ಯ ಕೊಡುವುದರ ಜೊತೆಗೆ, ಹೊಸದಾಗಿ ಟರ್ಫ್ ಹಾಕಿ ಮೈದಾನ, ಕಬಡ್ಡಿ, ಖೋಖೋ ಕೋರ್ಟ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಿಷಯವನ್ನೂ ಕೇಂದ್ರ ಸಚಿವರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.
ಇದೇ ತಿಂಗಳು 27 ರಿಂದ 29 ರ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ 20 ವರ್ಷದ ವಯೋಮಿತಿಯ ಪುರುಷರು ಮತ್ತು ಮಹಿಳೆಯರ ಹ್ಯಾಂಡ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಇದರ ಯಶಸ್ಸಿಗೆ ಆರಂಭದಿಂದ ಕೊನೆವರೆಗೂ ಸಂಪೂರ್ಣ ಸಹಕಾರ ಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಹಾಸನ ಜಿಲ್ಲಾ ಹಾಗೂ ಕರ್ನಾಟಕ ಹ್ಯಾಂಡ್‌ಬಾಲ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ನಡೆಯುವ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ೨೦ ಬಾಲಕಿಯರ, ೨೫ ಬಾಲಕರ ತಂಡಗಳು ಭಾಗಿಯಾಗಲಿ. ಕ್ರೀಡಾಪಟುಗಳು, ಅಧಿಕಾರಿಗಳು ಸಿಬ್ಬಂದಿ ಸೇರಿ ಒಟ್ಟಾರೆ 2500 ಮಂದಿ ಆಗಮಿಸುವ ನಿರೀಕ್ಷೆ ಇದೆ. ಇದಕ್ಕಾಗಿ ಊಟ, ವಸತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಯೂತ್ ಹಾಸ್ಟೆಲ್‌ನಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಕ್ರೀಡಾಪಟುಗಳಿಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ನಗರಸಭೆ ಕಡೆಯಿಂದ ಕೊಡಿಸಲಾಗುವುದು. ಸಾಲಗಾಮೆ ರಸ್ತೆ ಬಳಿಯ ಶೌಚಾಲಯ ಓಪನ್ ಮಾಡಿಸುವುದರ ಜೊತೆಗೆ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆ ಬಾವಿ ಕೊರೆಸಿಕೊಡುವುದಾಗಿ ಹೇಳಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದೇಶಕ ಸಿ.ಕೆ.ಹರೀಶ್, ಕುಮಾರಸ್ವಾಮಿ, ಸತೀಶ್, ಅನಿಲ್, ಆನಂದ್, ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು, ಇತರರು ಪಾಲ್ಗೊಂಡಿದ್ದರು.