ಆತಂಕ ಸೃಷ್ಟಿಸಿರುವ ಕಾಡಾನೆಗಳ ತೆರವಿಗೆ ಶಾಸಕ ವಿಠ್ಠಲ ಹಲಗೇಕರ ಆಗ್ರಹ

KannadaprabhaNewsNetwork | Published : Nov 7, 2024 12:38 AM

ಸಾರಾಂಶ

ಖಾನಾಪುರ ತಾಲೂಕಿನ ಚಾಪಗಾಂವ, ಜಳಗಾ, ನಂದಗಡ ಹಾಗೂ ಸುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ಓಡಾಡುತ್ತಿರುವ ಕಾಡಾನೆಗಳನ್ನು ಈ ಕೂಡಲೇ ವಿಶೇಷ ಕಾರ್ಯಪಡೆಯ ಸಹಾಯದಿಂದ ಸ್ಥಳಾಂತರಿಸಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ಚಾಪಗಾಂವ, ಜಳಗಾ, ನಂದಗಡ ಹಾಗೂ ಸುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ಓಡಾಡುತ್ತಿರುವ ಕಾಡಾನೆಗಳನ್ನು ಈ ಕೂಡಲೇ ವಿಶೇಷ ಕಾರ್ಯಪಡೆಯ ಸಹಾಯದಿಂದ ಸ್ಥಳಾಂತರಿಸಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದರು.

ಬುಧವಾರ ಬೆಂಗಳೂರಿನ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ದಾಂಡೇಲಿ ಅರಣ್ಯ ಪ್ರದೇಶದಿಂದ ಕಾಡಾನೆಗಳು ಮೇಲಿಂದ ಮೇಲೆ ಆಹಾರ ಅರಸುತ್ತ ತಾಲೂಕಿನ ಕಾಡಿನಂಚಿನ ಜಮೀನುಗಳಿಗೆ ಆಗಮಿಸುತ್ತವೆ. ಇಲ್ಲಿಯ ರೈತರು ಕಷ್ಟಪಟ್ಟು ಬೆಳೆದ ಭತ್ತ, ಕಬ್ಬು ಮತ್ತಿತರ ಬೆಳೆ ತಿಂದು, ತುಳಿದು ಹಾಳು ಮಾಡುತ್ತಿವೆ. ಕಾಡಾನೆಗಳ ದಾಳಿಯ ಭೀತಿಯಿಂದ ಕಾಡಂಚಿನ ಗ್ರಾಮಗಳ ಜನರು ಮನೆಯಿಂದ ಹೊಲಗಳಿಗೆ ಮುಕ್ತವಾಗಿ ಹೋಗಿಬರಲು ತೊಂದರೆ ಉಂಟಾಗಿದೆ ಎಂದು ವಿವರಿಸಿದರು.

ಗುಂಪಿನಿಂದ ಬೇರ್ಪಟ್ಟು ತಾಲೂಕಿಗೆ ಆಗಮಿಸಿದ ಅಂದಾಜು 18-20 ವರ್ಷ ವಯಸ್ಸಿನ ಕಾಡಾನೆಯೊಂದು ಕಳೆದ ಹಲವು ತಿಂಗಳಿನಿಂದ ತಾಲೂಕಿನ ನಂದಗಡ, ಚಾಪಗಾಂವ ಭಾಗದ ಜನವಸತಿ ಪ್ರದೇಶದ ಸಮೀಪ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಕೆಲವು ತಿಂಗಳುಗಳ ಹಿಂದೆ ಆನೆಯೊಂದು ತಾಲೂಕಿನ ನಾಗರಗಾಳಿ ಬಳಿ ರೈಲು ಹಳಿ ದಾಟುವಾಗ ರೈಲಿಗೆ ಸಿಲುಕಿ ಮೃತಪಟ್ಟಿದೆ. ಹೀಗಾಗಿ ಅನಾಹುತ ಸಂಭವಿಸುವ ಮೊದಲೇ ಕಾಡಾನೆಯನ್ನು ಬೇರೆಡೆ ಸ್ಥಳಾಂತರಿಸಬೇಕು. ದಾಂಡೇಲಿ ಅರಣ್ಯ ಪ್ರದೇಶದಿಂದ ಆನೆಗಳು ತಾಲೂಕಿಗೆ ಬರದಂತೆ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಸಂಬಂಧಪಟ್ಟ ವಿಶೇಷ ಕಾರ್ಯಪಡೆಯ ಅಧಿಕಾರಿಗಳ ಜೊತೆ ಮಾತನಾಡಿ, ತಕ್ಷಣವೇ ಆನೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Share this article