ಜಿಲ್ಲಾಸ್ಪತ್ರೆ ಕಾಮಗಾರಿ ಬಾಕಿ ಅನುದಾನ ಬಿಡುಗಡೆ ಶಾಸಕ ಯಶ್ಪಾಲ್‌ ಆಗ್ರಹ

KannadaprabhaNewsNetwork |  
Published : Aug 17, 2025, 04:01 AM IST
14ಯಶ್‌ಪಾಲ್ | Kannada Prabha

ಸಾರಾಂಶ

ಜಿಲ್ಲಾ ಆಸ್ಪತ್ರೆ ಕಾಮಗಾರಿ ಬಾಕಿ ಅನುದಾನ ತಕ್ಷಣ ಬಿಡುಗಡೆ ಮಾಡುವಂತೆ ವಿಧಾನಸಭಾ ಅಧಿವೇಶನದಲ್ಲಿ ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಆರೋಗ್ಯ ಸಚಿವರನ್ನು ಆಗ್ರಹಿಸಿದ್ದಾರೆ.

ಉಡುಪಿ: ಉಡುಪಿಯ ನೂತನ ಜಿಲ್ಲಾ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಬಾಕಿ ಅನುದಾನ ತಕ್ಷಣ ಬಿಡುಗಡೆ ಮಾಡುವಂತೆ ವಿಧಾನಸಭಾ ಅಧಿವೇಶನದಲ್ಲಿ ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಆರೋಗ್ಯ ಸಚಿವರನ್ನು ಆಗ್ರಹಿಸಿದ್ದಾರೆ.

ಜಿಲ್ಲಾಸ್ಪತ್ರೆ ಕಾಮಗಾರಿಯನ್ನು ಡಿಸೆಂಬರ್ 2021 ರಲ್ಲಿ ಪ್ರಾರಂಭಿಸಲಾಗಿದ್ದು, ನಿರ್ಮಾಣ ಕಾಮಗಾರಿಯು ಅಂತಿಮ ಹಂತದಲ್ಲಿದೆ. ಮೂಲ ಅಂದಾಜಿನಲ್ಲಿನ ಅಂಶಗಳಲ್ಲಿ ಕೆಲವೊಂದು ಕಾಮಗಾರಿಗಳ ಅಗತ್ಯ ಬದಲಾವಣೆ ಹಾಗೂ ಹೆಚ್ಚುವರಿ ಅಂಶಗಳನ್ನು ಕೈಗೊಂಡಿರುವ ಕಾರಣ ನಿರ್ಮಾಣ ಕಾಮಗಾರಿ ವಿಳಂಬವಾಗಿರುತ್ತದೆ.

ಕಾಮಗಾರಿಯ ಆಡಳಿತಾತ್ಮಕ ಅನುಮೋದಿತ ಮೊತ್ತವು ರು. 115 ಕೋಟಿ ಮತ್ತು ಟೆಂಡರ್ ಮೊತ್ತವು 110.24 ಕೋಟಿಯಾಗಿದ್ದು, ಈ ಮೊತ್ತದಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಜಿ.ಎಸ್.ಟಿ ಮೊತ್ತ ಸುಮಾರು ರು. 20.42ಕೋಟಿ, ಮತ್ತು ಟೆಂಡರ್ ಕರಾರಿನಂತೆ ದರ ಏರಿಕೆ (ಪ್ರೈಸ್ ಎಕ್ಸಲೇಶನ್) ಮೊತ್ತ ಸುಮಾರು ರು. 18.44 ಕೋಟಿ ಇವುಗಳನ್ನು ಮೂಲ ಅಂದಾಜಿನಲ್ಲಿ ಅಳವಡಿಸಿಕೊಂಡಿಲ್ಲ.

ಆಸ್ಪತ್ರೆ ಸಂಪೂರ್ಣ ಉಪಯೋಗಕ್ಕೆ ಬರಲು ಅವಶ್ಯವಿರುವ ಇತರೆ ಕಾಮಗಾರಿಗಳಿಗಾಗಿ ಸುಮಾರು ರು. 9.50 ಕೋಟಿ, ಒಟ್ಟಾರೆಯಾಗಿ ರು..48.36 ಕೋಟಿ ಹೆಚ್ಚುವರಿ ಮೊತ್ತದ ಅವಶ್ಯಕತೆ ಇರುವುದರಿಂದ ಸದರಿ ಹೆಚ್ಚುವರಿ ಅಂಶಗಳನ್ನು ಪರಿಗಣಿಸಿ ಅಂದಾಜನ್ನು ಪರಿಷ್ಕರಿಸಿ ಸರ್ಕಾರದಿಂದ ಅನುಮೋದನೆ ಕೋರಿದ ಕಡತವು ಹಲವು ಸಮಯಗಳಿಂದ ಮಂಜೂರಾತಿಗೆ ಬಾಕಿ ಉಳಿದಿದೆ. ಜಿಲ್ಲಾಸ್ಪತ್ರೆಗೆ ಅವಶ್ಯವಿರುವ ವೈದ್ಯಾಧಿಕಾರಿಗಳು ಮತ್ತು ವೈದ್ಯಕೀಯೇತರ ಸಿಬ್ಬಂದಿ ಹುದ್ದೆ ಮಂಜೂರಾತಿಯೂ ಆಗಬೇಕಾಗಿದ್ದು, ಈ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಇಲಾಖೆಯ ಮೂಲಕ ಸಲ್ಲಿಸಲಾಗಿದೆ. ನೂತನ ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಹೆಚ್ಚುವರಿ ವೈದ್ಯಕೀಯ ಸಲಕರಣೆಗಳ ಬೇಡಿಕೆಯನ್ನು ಈಗಾಗಲೇ ಇಲಾಖೆಗೆ ಸಲ್ಲಿಸಿದ್ದು ಸಲಕರಣೆಗಳ ಖರೀದಿಗಾಗಿ ಹೆಚ್ಚುವರಿ ರು. 30 ಕೋಟಿ ಅನುದಾನದ ಪ್ರಸ್ತಾವನೆಯು ಮಂಜೂರಾತಿಗೆ ಬಾಕಿಯಿದೆ.

ಕಳೆದ ಹಲವು ದಿನಗಳಿಂದ ಆರೋಗ್ಯ ಇಲಾಖೆಯ ಸರ್ವರ್ ಸಮಸ್ಯೆಯಿಂದ ಆಯುಷ್ಮಾನ್ ಯೋಜನೆಯ ಸೌಲಭ್ಯದಿಂದ ರೋಗಿಗಳು ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಸಮಸ್ಯೆ ಪರಿಹಾರಕ್ಕೆ ತಕ್ಷಣ ಕ್ರಮ ವಹಿಸುವಂತೆ ಆಗ್ರಹಿಸಿದರು.

ಉಡುಪಿ ಶಾಸಕರ ಮನವಿಗೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿಯ ಪ್ರಸ್ತಾವಿತ ಬೇಡಿಕೆಯ ಮೊತ್ತವನ್ನು ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಮಂಜೂರು ಮಾಡಲು ಆದ್ಯತೆ ನೀಡಿ, ಅಗತ್ಯ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ಮಂಜೂರು ಹಾಗೂ ಆಯುಷ್ಮಾನ್ ಸೇವೆ ಸರ್ವರ್ ಸಮಸ್ಯೆಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌