ಆರ್‌ಟಿಒ ಕಚೇರಿಗೆ ಶಾಸಕ ಯಶ್‌ಪಾಲ್ ಭೇಟಿ

KannadaprabhaNewsNetwork |  
Published : Jul 29, 2026, 02:45 AM IST
ಶಾಸಕ ಯಶ್‌ಪಾಲ್ ಸುವರ್ಣ ಆರ್‌ಟಿಓ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇದ್ದು, ಸಾರ್ವಜನಿಕರ ಕಚೇರಿ ಸಂಬಂಧಿತ ಕೆಲಸಗಳು ವಿಳಂಬವಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಸೋಮವಾರ ಸಾರಿಗೆ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಉಡುಪಿ: ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಪ್ರಮುಖ ಹುದ್ದೆಗಳು ಖಾಲಿ ಇದ್ದು, ಸಾರ್ವಜನಿಕರ ಕಚೇರಿ ಸಂಬಂಧಿತ ಕೆಲಸಗಳು ವಿಳಂಬವಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಸೋಮವಾರ ಸಾರಿಗೆ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಆರ್ ಟಿಒ ಕಚೇರಿಯಲ್ಲಿ ಪ್ರಮುಖ ಹುದ್ದೆಗಳಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸಹಾಯಕ ಸಾರಿಗೆ ಅಧಿಕಾರಿಗಳೇ ಇಲ್ಲದೆ, ಹಿರಿಯ ಮೋಟಾರು ವಾಹನ ನಿರೀಕ್ಷಕರು, ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 5 ಮೋಟಾರು ವಾಹನ ನಿರೀಕ್ಷಕರ ಹುದ್ದೆಯಲ್ಲಿ 4 ಖಾಲಿ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 22 ಠಾಣೆ, 2 ಅಧಿಕಾರಿಗಳು!: ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಡ್ರೈವಿಂಗ್ ಲೈಸೆನ್ಸ್, ವಾಣಿಜ್ಯ, ರಿಕ್ಷಾ, ಬಸ್‌, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಸಹಿತ ಸಾರಿಗೆ ವಾಹನಗಳ ಫಿಟ್ನೆಸ್ ಸರ್ಟಿಫಿಕೆಟ್ ಪಡೆಯಲು ವಾಹನ ಮಾಲೀಕರು-ಚಾಲಕರು ಹರಹಾಹಸ ಪಡುತ್ತಿದ್ದಾರೆ.

ಕೇವಲ ಇಬ್ಬರು ಮೋಟಾರು ವಾಹನ ನಿರೀಕ್ಷಕರು ಉಡುಪಿಯ ಜೊತೆಗೆ ವಾರದಲ್ಲಿ 3 ದಿನ ಇತರ ತಾಲೂಕುಗಳಲ್ಲಿ ಕ್ಯಾಂಪ್ ಜೊತೆಗೆ ಜಿಲ್ಲಾ ಕಚೇರಿಯ ವಾಹನಗಳ ಪರಿಶೀಲನೆ ನಡೆಸಬೇಕಾಗಿದೆ. ಜಿಲ್ಲೆಯ 22 ಪೊಲೀಸ್ ಠಾಣೆಗಳಿಗೆ ಸಂಬಂಧಿತ ಅಪರಾಧ ಪ್ರಕರಣಗಳ ವಾಹನ ತಪಾಸಣೆಯನ್ನು ಇದೇ ಅಧಿಕಾರಿ ಮಾಡಬೇಕಿದೆ ಎಂಬ ಅಸಹಾಯಕತೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದರು. ಜನರ ತೀವ್ರ ಅಸಮಾಧಾನ: ಬ್ರಹ್ಮಾವರ ತಾಲೂಕು ಆಗಿ ಹಲವು ವರ್ಷ ಕಳೆದರೂ ರಿಕ್ಷಾ, ಟ್ಯಾಕ್ಸಿ ಚಾಲಕರು ಬ್ರಹ್ಮಾವರದಲ್ಲಿ ಆರ್ ಟಿಓ ಕ್ಯಾಂಪ್ ನಡೆಸಲು ಬೇಡಿಕೆ ಇಟ್ಟಿದ್ದರೂ, ಸಿಬ್ಬಂದಿ ಕೊರತೆಯಿಂದ ಈವರೆಗೆ ಕ್ಯಾಂಪ್ ಆರಂಭವಾಗಿಲ್ಲ. ರಿಕ್ಷಾ, ಟ್ಯಾಕ್ಸಿಗಳಲ್ಲಿ ಬಾಡಿಗೆ ಮಾಡಿ ದುಡಿದು ತಿನ್ನುವ ಕಾರ್ಮಿಕ ವರ್ಗದವರು ತಮ್ಮ ಕೆಲಸ ಕಾರ್ಯಗಳಿಗೆ ಆರ್ ಟಿಒ ಕಚೇರಿಗೆ ದಿನನಿತ್ಯ ಅಲೆದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದರು.

ಸರ್ಕಾರದ ಗಮನಕ್ಕೆ ತರುವೆ: ಕಚೇರಿಯ ಸಿಬ್ಬಂದಿಗಳ ಖಾಲಿ ಹುದ್ದೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ರಾಜ್ಯ ಸರ್ಕಾರಕ್ಕೆ ವಾರ್ಷಿಕ 312 ಕೋಟಿ ರು. ಆದಾಯ ಸಂಗ್ರಹಿಸುವ ಉಡುಪಿ ಆರ್ ಟಿಒ ಕಚೇರಿಯಲ್ಲಿ ಸರ್ಕಾರ ಅಗತ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡದೆ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಾರಿಗೆ ಸಚಿವರನ್ನು ಭೇಟಿಯಾಗಿ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.

ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಶೀಘ್ರ ಸೇವೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆರ್ ಟಿಒ ಕಚೇರಿ ಪ್ರಾಂಗಣದಲ್ಲಿ ಗಿಡಗಂಟಿಗಳು ಬೆಳೆದಿರುವುದನ್ನು ಗಮನಿಸಿದ ಶಾಸಕರು ತಕ್ಷಣ ಅದನ್ನು ತೆರವು ಮಾಡಿ ಕಚೇರಿ ಪರಿಸರದಲ್ಲಿ ಸ್ವಚ್ಚತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕಿದಿಯೂರು ಕ್ರೆ.ಕೋ.ಆಪ್ ಸೊಸೈಟಿ ಕಿನ್ನಿಮುಲ್ಕಿ ಶಾಖೆ ಶುಭಾರಂಭ
ಹಾಸನ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂಲ್ಕಿಯ ಮಹಿಳೆ ಸಾವು