ಪುಟ 2ಕ್ಕೆ ಲೀಡ್ ಸುದ್ದಿ.. ಬಿಜೆಪಿಗೆ ಶಾಸಕ ಯತ್ನಾಳ ಅನಿವಾರ್ಯವಲ್ಲ

KannadaprabhaNewsNetwork |  
Published : Apr 08, 2026, 04:00 AM IST
ಯತ್ನಾಳ ಪ್ರಚಾರ ಮಾಡುತ್ತಿರೋದು ಅವರ ವೈಯುಕ್ತಿಕ ವಿಚಾರ: ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಿಜೆಪಿಗೆ ಶಾಸಕ ಯತ್ನಾಳ ಅನಿವಾರ್ಯವಲ್ಲ, ಪಕ್ಷಕ್ಕೆ ಕಾರ್ಯಕರ್ತರು ಅನಿವಾರ್ಯ. ಯತ್ನಾಳರನ್ನು ಶಾಸಕ ಹಾಗೂ ಸಚಿವರನ್ನಾಗಿ ಮಾಡಿದ್ದೇ ಕಾರ್ಯಕರ್ತರು. ಬಾಗಲಕೋಟೆಯಲ್ಲಿ ಯತ್ನಾಳ ಪ್ರಚಾರ ಮಾಡುತ್ತಿರೋದು ಅದು ಅವರ ವೈಯುಕ್ತಿಕ ವಿಚಾರ. ಯತ್ನಾಳ ಪ್ರಚಾರ ನಮಗೆ ಅನಿವಾರ್ಯವಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿಗೆ ಶಾಸಕ ಯತ್ನಾಳ ಅನಿವಾರ್ಯವಲ್ಲ, ಪಕ್ಷಕ್ಕೆ ಕಾರ್ಯಕರ್ತರು ಅನಿವಾರ್ಯ. ಯತ್ನಾಳರನ್ನು ಶಾಸಕ ಹಾಗೂ ಸಚಿವರನ್ನಾಗಿ ಮಾಡಿದ್ದೇ ಕಾರ್ಯಕರ್ತರು. ಬಾಗಲಕೋಟೆಯಲ್ಲಿ ಯತ್ನಾಳ ಪ್ರಚಾರ ಮಾಡುತ್ತಿರೋದು ಅದು ಅವರ ವೈಯುಕ್ತಿಕ ವಿಚಾರ. ಯತ್ನಾಳ ಪ್ರಚಾರ ನಮಗೆ ಅನಿವಾರ್ಯವಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಯತ್ನಾಳ ಪ್ರಚಾರ ಮಾಡುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರು ಯತ್ನಾಳ ಅವರಿಗೆ ಮನೆಗೆ ಹೋಗಿ ಪ್ರಚಾರ ಮಾಡಿ ಎಂದು ಹೇಳಿಲ್ಲ. ಚರಂತಿಮಠರ ವೈಯುಕ್ತಿಕ ಗೆಳೆತನದಿಂದ ಪ್ರಚಾರ ಮಾಡುತ್ತಿದ್ದಾರೆ ಎಂದರು.ಬಾಗಲಕೋಟೆ ಪ್ರಚಾರಕ್ಕೆ ಯತ್ನಾಳ ಕರೆದಿದ್ದಕ್ಕೆ ಬಂದಿದ್ದಾಗಿ ಮಾಜಿ ಸಚಿವ ಸಿ.ಸಿ.ಪಾಟೀಲ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ನಾಯಕರಲ್ಲಿ ರೆಬಲ್ಸ್ ಎಂದು ಕೆಲವರು ಓಡಾಡುತ್ತಿದ್ದಾರೆ. ರೆಬಲ್ಸ್ ಜತೆಗೆ ಕೆಲವರು ಮಿಂಗಲ್ ಆಗುತ್ತಿದ್ದಾರೆ. ಮಾಜಿ ಸಚಿವ ಸಿ.ಸಿ.ಪಾಟೀಲ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು.

ಬಿಜೆಪಿಗೆ ಯತ್ನಾಳ ಘರ್‌ ವಾಪಸಿ ವಿಚಾರದ ಕುರಿತು ಮಾತನಾಡಿ, ಯತ್ನಾಳ ಬದಲಾಗಬೇಕಿದೆ, ಬಿಜೆಪಿ ರಾಷ್ಟ್ರಾಧ್ಯಕ್ಷ 45 ವರ್ಷದ ನಿತಿನ್ ನಬೀನ್ ನಮ್ಮ ಸರ್ವೋಚ್ಛ ನಾಯಕ ಎಂದು ಸ್ವತಃ ಮೋದಿಯವರೇ ಹೇಳಿದ್ಧಾರೆ. ಆದರೆ, ಯತ್ನಾಳ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾತನಾಡುತ್ತಾರೆ. ಅದನ್ನು ಬದಲಾಯಿಸಿಕೊಳ್ಳಬೇಕು, ಯತ್ನಾಳ ನಡತೆ ಬದಲಾಗಬೇಕು. ಯತ್ನಾಳರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವುದೋ ಅಥವಾ ಬೇಡವೋ ಎಂಬುವುದು ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಬಿಜೆಪಿಗೆ ಮರಳಿ ಸೇರುವುದಾದರೆ ಯತ್ನಾಳ ಬದಲಾಗಲೇಬೇಕು. ಇಲ್ಲವಾದರೆ ನಾನೂ ವಿರೋಧ ಮಾಡುತ್ತೇನೆಂದು ಹೇಳಿದರು. ತಮ್ಮ ನಾಯಕ ತಪ್ಪು ಮಾಡಿದಾಗ, ತಪ್ಪು ಹೆಜ್ಜೆಗಳನ್ನು ಇಟ್ಟಾಗ ಬಸನಗೌಡ ಯತ್ನಾಳರ ಶಿಷ್ಯಂದಿರು ಹಾಗೂ ಅವರ ಅಭಿಮಾನಿಗಳು ಬಸನಗೌಡರಿಗೆ ತಿಳಿಸಿ ಹೇಳಬೇಕು ಎಂದರು.

ಬಾಗಲಕೋಟೆ ಹಾಗೂ ದಾವಣಗೆರೆ ಎರಡೂ ಕ್ಷೇತ್ರಗಳಲ್ಲಿ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಿಸಲು ರಾಜ್ಯಾಧ್ಯಕ್ಷ ವಿಜಯೇಂದ್ರ ರವರ ನೇತೃತ್ವದಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಅವರ ನೇತೃತ್ವದಲ್ಲಿ ನಾವೆಲ್ಲರೂ ಬಾಗಲಕೋಟೆ ಕ್ಷೇತ್ರದ ರಾಂಪೂರ ಜಿಪಂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಗಳ ಜನರು ಕಾಂಗ್ರೆಸ್ ಗೆ ಸೋಲಿಸುವ ಮೂಲಕ ಪಾಠ ಕಲಿಸಬೇಕಿದೆ. ವಿಜಯಪುರ ಜಿಲ್ಲೆಯ ಕಾರ್ಯಕರ್ತರು, ಜನರು ಬಾಗಲಕೋಟೆಯಲ್ಲಿ ಮತದಾರರ ಮನಗೆದ್ದು ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಗೆ ಹೇಳಿಕೊಳ್ಳಲು ಅಭಿವೃದ್ಧಿ ಕೆಲಸಗಳೇ ಇಲ್ಲ. ರಾಜ್ಯದ ಮುಖ್ಯಮಂತ್ರಿಯಾದಿಯಾಗಿ ಸಚಿವರೆಲ್ಲ ಉಪ ಚುನಾವಣೆ ಕ್ಷೇತ್ರಗಳಲ್ಲೇ ಬಿಡಾರ ಹೂಡಿದ್ದಾರೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಜನರ ಸಮಸ್ಯೆಗಾಗಿ ಒಂದು ಬಾರಿಯೂ ಬಿಡಾರ ಹೂಡಲಿಲ್ಲ. ಹಾಗಾಗಿ ಈಗ ಮತ ಕೇಳುವ ನೈತಿಕತೆಯನ್ನೇ ಕಾಂಗ್ರೆಸ್ ಕಳೆದುಕೊಂಡಿದೆ. ಆದರೂ ಹಣ, ಹೆಂಡ ತಂದು ಕಾಂಗ್ರೆಸ್ ನವರು ಕೂತಿದ್ದಾರೆ, ಅವರು ನಿಯತ್ತಿನಿಂದ ಚುನಾವಣೆ ಮಾಡುತ್ತಿಲ್ಲ ಎಂದರು.

ಬಿಜೆಪಿ ಮುಖಂಡ ಡಿ.ಜಿ.ಬಿರಾದಾರ ಮಾತನಾಡಿ, ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾಗಿಯಾಗಿದ್ದು ಪ್ರಚಾರ ನಡೆದಿದೆ. ಅಲ್ಲಿನ ಮತದಾರರಿಗೆ ಬಿಜೆಪಿ ಪರ ಒಲವು ಇದೆ. ಕಾಂಗ್ರೆಸ್ ಸರ್ಕಾರ ಅಲ್ಲಿನ ಸಂತ್ರಸ್ಥರಿಗೆ ಹಾಗೂ ನೀರಾವರಿಗೆ ಹಣ ಕೊಟ್ಟಿಲ್ಲ. ರೈತರು ಭೂಮಿ ಕಳೆದುಕೊಂಡಿದ್ದು, ಅವರಿಗೆ ನೀರು ಇಲ್ಲ, ಪರಿಹಾರವೂ ಇಲ್ಲ ಎಂಬಂತಾಗಿದೆ. ನ್ಯಾಯಾಲಯದಲ್ಲಿ ಆದೇಶವಾದ ರೈತರ ಪ್ರಕರಣಗಳಲ್ಲೂ ಸಹ ಪರಿಹಾರ ಹಣ ಕೊಟ್ಟಿಲ್ಲ. ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸಿರುವ ಕಾಲುವೆ ಕಾಮಗಾರಿಗಳಿಗೆ ಸುಮಾರು 10 ಸಾವಿರ ಕೋಟಿ ಹಣವನ್ನೂ ಕೊಟ್ಟಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡ ಮಲ್ಲು ಕಲಾದಗಿ ಇದ್ದರು.

----------7bij01: ವಿಜಯಪುರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ