ಶಾಸಕರು ನಿಜವಾದ ಸಹಕಾರಿಗಳಲ್ಲ

KannadaprabhaNewsNetwork | Published : May 22, 2025 1:55 AM
ಈ ಹಿಂದೆ ಡಿಸಿಸಿ ಬ್ಯಾಂಕ್ ಅದೋಗತಿಗೆ ಹೋಗಿದ್ದಾಗ ಯಾರೂ ಬರಲಿಲ್ಲ. ಈಗ ಅದೊಂದು ಜೇನುಗೂಡು ಎಂಬುವುದು ತಿಳಿದು ಎಲ್ಲರೂ ಜೇನು ಸವಿಯಲು ಬರುತ್ತಿದ್ದಾರೆ. ಬ್ಯಾಲಹಳ್ಳಿ ಗೋವಿಂದೇಗೌಡರು ಬ್ಯಾಂಕ್ ಸುಧಾರಣೆ ಮಾಡಿ ಉನ್ನತ ಮಟ್ಟಕ್ಕೆ ಕೊಂಡೋಯ್ದಾಗ ಎಲ್ಲರೂ ಅವರನ್ನು ಚುನಾವಣೆಯಲ್ಲಿ ಬಳಸಿಕೊಂಡು ಬಳಿಕ ಪಾತಾಳಕ್ಕೆ ತುಳಿದರು.
Follow Us

ಕನ್ನಡಪ್ರಭ ವಾರ್ತೆ ಕೋಲಾರಸಹಕಾರ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಗೆ ವಿವಿಧ ಕ್ಷೇತ್ರಗಳ ಶಾಸಕರು ನಾಮಪತ್ರ ಸಲ್ಲಿಸುತ್ತಿರುವುದು ಖಂಡನಾರ್ಹ ಎಂದು ಕರ್ನಾಟಕ ದಲಿತ ಸಿಂಹ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೂವಳ್ಳಿ ಪ್ರಕಾಶ್ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು, ದಲಿತರು, ಕಾರ್ಮಿಕರು. ಇವರೆಲ್ಲರನ್ನೂ ಕೇವಲ ಓಟ್ ಬ್ಯಾಂಕ್ ಆಗಿ ಪರಿಗಣಿಸಿದ್ದು ಸಣ್ಣ ಪುಟ್ಟ ಅಧಿಕಾರ ಬಿಡದಂತೆ ಎಲ್ಲವೂ ತಮಗೆ ಬೇಕೆನ್ನುವಂತೆ ಶಾಸಕರು ವರ್ತಿಸುತ್ತಿರುವುದು ನಾಚಿಕೆಗೇಡು ಎಂದರು.

ಜೇನು ಸವಿಯುವ ಉದ್ದೇಶ

ಈ ಹಿಂದೆ ಡಿಸಿಸಿ ಬ್ಯಾಂಕ್ ಅದೋಗತಿಗೆ ಹೋಗಿದ್ದಾಗ ಯಾರೂ ಬರಲಿಲ್ಲ. ಈಗ ಅದೊಂದು ಜೇನುಗೂಡು ಎಂಬುವುದು ತಿಳಿದು ಎಲ್ಲರೂ ಜೇನು ಸವಿಯಲು ಬರುತ್ತಿದ್ದಾರೆ. ಬ್ಯಾಲಹಳ್ಳಿ ಗೋವಿಂದೇಗೌಡರು ಬ್ಯಾಂಕ್ ಸುಧಾರಣೆ ಮಾಡಿ ಉನ್ನತ ಮಟ್ಟಕ್ಕೆ ಕೊಂಡೋಯ್ದಾಗ ಎಲ್ಲರೂ ಅವರನ್ನು ಚುನಾವಣೆಯಲ್ಲಿ ಬಳಸಿಕೊಂಡು ಬಳಿಕ ಪಾತಾಳಕ್ಕೆ ತುಳಿದರು ಎಂದು ಟೀಕಿಸಿದರು.

ನಿಜವಾದ ಸಹಕಾರಿಗಳಲ್ಲ

ಡಿಸಿಸಿ ಬ್ಯಾಂಕ್, ಹಾಲು ಒಕೂಟ ಎರಡು ರೈತರ ಮತ್ತು ಮಹಿಳೆಯರ ಜೀವಾಳವಾಗಿದೆ. ಸ್ವಾವಲಂಬಿ ಬದುಕಿಗೆ ಸಹಾಯ ಹಸ್ತವಾದ ಸಹಕಾರ ಕ್ಷೇತ್ರವನ್ನು ಕಬಳಿಸಲು ಹೊಂಚು ಹಾಕುತ್ತಿರುವ ಶಾಸಕರು ಯಾರೂ ನಿಜವಾದ ಸಹಕಾರಿಗಳಲ್ಲ ಎಂದರು.

ನಾಮಪತ್ರ ಹಿಂಪಡೆಯಲಿ

ಯಾವುದೇ ಶಾಸಕರಿಗೆ ಆತ್ಮಾಭಿಮಾನ, ಆತ್ಮಸಾಕ್ಷಿ ಎಂಬುವುದು ಇದ್ದರೆ ಯಾರು ಸಹಕಾರ ಕ್ಷೇತ್ರಗಳಿಗೆ ಕಾಲಿಡಬೇಡಿ. ನಿಮ್ಮ ಜನಾದೇಶ ನೀಡಿರುವಂತ ಜವಾಬ್ದಾರಿಗಳನ್ನು ಪ್ರಮಾಣಿಕವಾಗಿ ನಿರ್ವಾಹಿಸಿ ನಿಮ್ಮ ಗೌರವ ಕಾಪಾಡಿಕೊಳ್ಳಿ. ನಿಜವಾದ ಸಹಕಾರಿಗಳಿಗೆ ರೈತರಿಗೆ ಅವಕಾಶ ಮಾಡಿಕೊಡಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಶಾಸಕರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದರು.